ಪಕ್ಷಾಂತರ ಇದ್ದದ್ದೆ ಸಿಎಂ

ಬೆಂಗಳೂರು,ಮಾ.೧೦:ಚುನಾವಣಾ ಸಂದರ್ಭದಲ್ಲಿ ಪಕ್ಷಾಂತರಗಳು ಸಾಮಾನ್ಯ, ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಹೋಗುವವರು ಬರುವವರು ಇರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ಮುಂದಿನ ದಿನಗಳಲ್ಲಿ ಪಕ್ಷಾಂತರ ಮತ್ತಷ್ಟು ಬಿರುಸಾಗಲಿದೆ ಎಂಬ ಸುಳಿವು ನೀಡಿದ್ದಾರೆ.ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಪಕ್ಷ ಬಿಡುವುದು, ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದು, ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬರುವುದು ಸಾಮಾನ್ಯ, ಪಕ್ಷಾಂತರಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ಎಲ್ಲವನ್ನೂ ಕಾದು ನೋಡೋಣ ಎಂದರು.ಬಿಜೆಪಿಗೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ರಾಜೀನಾಮೆ ನೀಡಿ ನಿನ್ನೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಬೆನ್ನಲ್ಲೆ ಬಿಜೆಪಿಯ ಇನ್ನೂ ಕೆಲ ನಾಯಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಸಂದರ್ಭದಲ್ಲಿ ಇವೆಲ್ಲ ಇದ್ದದ್ದೆ ಎಂದರು.
ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಇನ್ನೂ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿಲ್ಲ. ಬಿಜೆಪಿ ಜತೆ ಅವರದು ೩ ದಶಕಗಳ ಸಂಬಂಧ. ಹಾಗಾಗಿ, ಅವರು ಎಲ್ಲವನ್ನೂ ನೋಡಿ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸ ತಮ್ಮದು ಎಂದು ಹೇಳುವ ಮೂಲಕ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಬರಬಹುದು ಎಂಬ ಸುಳಿವನ್ನು ಮುಖ್ಯಮಂತ್ರಿಗಳು ನೀಡಿದರು.
ಮಂಡ್ಯ ಸಂಸದೆ ಸುಮಲತಾ ಅವರು ನಿನ್ನೆ ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಇಂದು ಅವರು ತಮ್ಮ ನಿರ್ಧಾರವನ್ನು ಪ್ರಕಟ ಮಾಡುತ್ತಾರೆ ಎಂದು ಹೇಳಿ ಸುಮಲತಾ ಬಿಜೆಪಿ ಸೇರುವುದು ಖಚಿತ ಎಂಬ ದಾಟಿಯಲ್ಲಿ ಮಾತನಾಡಿದರು.
ಸಮೀಕ್ಷೆ ಆಧರಿಸಿ ಟಿಕೆಟ್
ವಿಧಾನಸಭಾ ಚುನಾವಣೆಗೆ ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಸಮೀಕ್ಷೆಗಳನ್ನು ನಡೆಸಿದ್ದೇವೆ. ಈ ಸಮೀಕ್ಷೆಗಳನ್ನಾಧರಿಸಿ ಟಿಕೆಟ್‌ಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.
ಯಾರಿಗೆ ಟಿಕೆಟ್ ಎಂಬುದನ್ನು ಸಮೀಕ್ಷಾ ವರದಿಗಳನ್ನಿಟ್ಟುಕೊಂಡು ಪಕ್ಷದ ಕೇಂದ್ರ ಚುನಾವಣಾ ಸಮಿತಿ ತೀರ್ಮಾನಿಸುತ್ತದೆ ಎಂದರು.
ಬಿಜೆಪಿಗೆ ಈ ಚುನಾವಣೆಯಲ್ಲಿ ೬೫ ಸ್ಥಾನ ಬರುತ್ತದೆ ಎಂಬ ಡಿ.ಕೆ. ಶಿವಕುಮಾರ್‌ರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ಗೆ ೬೫ ಸೀಟು ಬರಬಹುದು ಎಂದು ಹೇಳಿರಬಹುದು, ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ ಎಂದರು.
ಪಕ್ಷದ ಸಂಘಟನೆ ಬೂತ್ ಮಟ್ಟದಲ್ಲಿ ಗಟ್ಟಿ ಇದ್ದು, ಇದು ನಮ್ಮ ಶಕ್ತಿ, ಚುನಾವಣೆಗೆ ಪಕ್ಷದಲ್ಲಿ ೩ನೇ ಹಂತದ ಪ್ರಚಾರ ನಡೆಯುತ್ತಿದೆ, ಕಳೆದ ೪ ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆ, ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.