ಪಕ್ಷಾಂತರಿಗಳೇ ಕೂಡ್ಲಿಗಿ ಕ್ಷೇತ್ರದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು.


ಬಿ. ನಾಗರಾಜ. ಕೂಡ್ಲಿಗಿ.
ಕೂಡ್ಲಿಗಿ.ಏ. 22 :- ಕೂಡ್ಲಿಗಿ ಕ್ಷೇತ್ರದಲ್ಲಿ ಪ್ರಮುಖ ಪಕ್ಷದ ಟಿಕೆಟ್ ಆಕಾಂಕ್ಷಿಗಳೇ ಪಕ್ಷದಿಂದ ಪಕ್ಷಕ್ಕೆ ಜಿಗಿದು ಪಕ್ಷಾಂತರಿಗಳಾಗುವ ಮೂಲಕ ಪ್ರಮುಖ ಪಕ್ಷಗಳ ಟಿಕೇಟ್ ಪಡೆದು ಸ್ಪರ್ಧೆಗಿಳಿದ ಪ್ರಮುಖರಾಗಿದ್ದಾರೆ.
ಹೌದು ಈ ಪಕ್ಷಾಂತರ ಪರ್ವದ ನೋಟ ಕೂಡ್ಲಿಗಿ ಕ್ಷೇತ್ರದಲ್ಲಿ ಈ ಭಾರಿ ಕಂಡುಬಂದಿದೆ ಇದಕ್ಕೆ ಸಾಕ್ಷಿ ಎಂಬಂತೆ ಕೂಡ್ಲಿಗಿ ಕ್ಷೇತ್ರದ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಪ್ರಮುಖರಲ್ಲಿ ಲೋಕೇಶ ವಿ ನಾಯಕ ಹಾಗೂ ಡಾ ಎನ್ ಟಿ ಶ್ರೀನಿವಾಸ ಇವರಿಬ್ಬರಲ್ಲಿ ಕಳೆದ ಏಳು ವರ್ಷದಿಂದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿದ ಲೋಕೇಶ ನಾಯಕ ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 29ಸಾವಿರ ಮತ ಪಡೆದುಕೊಂಡು ಪರಾಜಿತಗೊಂಡು  ಮತ್ತೆ ಚುನಾವಣೆ ನಂತರ ಕಾಂಗ್ರೆಸ್ ಸೇರಿಕೊಂಡಿದ್ದರು ಈ ಭಾರಿ ಸಹ ಕಾಂಗ್ರೆಸ್ ಟಿಕೇಟ್ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿರುವಾಗ ಜೆಡಿಎಸ್ ಅಭ್ಯರ್ಥಿಯಾಗಿ ಕಳೆದ ಚುನಾವಣೆಯಲ್ಲಿ ಪರಾಜಿತರಾಗಿದ್ದ ಮಾಜಿ ಶಾಸಕ ದಿ. ಎನ್ ಟಿ ಬೊಮ್ಮಣ್ಣ ಅವರ ಪುತ್ರ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿ ಪಕ್ಷಾಂತರ ಪರ್ವದ ಮೊದಲ ಹೆಜ್ಜೆ ಇಟ್ಟು ಎರಡೇ ತಿಂಗಳಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಪ್ರಮುಖ ಪಕ್ಷದ ಅಭ್ಯರ್ಥಿಯಾದರೆ, ಕಾಂಗ್ರೆಸ್ ಟಿಕೆಟ್ ಎರಡನೇ ಭಾರಿಯೂ ಕೈ ತಪ್ಪಿತು ಎಂದು ಬೇಸರ ವ್ಯಕ್ತಪಡಿಸಿದ ಲೋಕೇಶ ನಾಯಕರ ಸಮಯವನ್ನೇ ಕಾದಿದ್ದ ಬಿಜೆಪಿ ಪಕ್ಷದ ಪ್ರಮುಖರು ಲೋಕೇಶ ನಾಯಕನನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದು ಅಲ್ಲದೆ ಪಕ್ಷಾಂತರಿಯಾದ ಈತನಿಗೆ ಬಿಜೆಪಿ ಟಿಕೇಟ್ ದೊರಕಿದ್ದು ಈಗ ಕಾಂಗ್ರೇಸ್ ನಿಂದ ಜಂಪಾದ ಲೋಕೇಶ ನಾಯಕನಿಗೆ ಕಮಲ ಪಕ್ಷ ಟಿಕೇಟ್ ನೀಡಿ ಸ್ಪರ್ಧೆಗಿಳಿಸಿದೆ ಮತ್ತು ಇನ್ನೊಂದು ಪ್ರಾದೇಶಿಕ ಪ್ರಮುಖ ಪಕ್ಷವಾದ ಜೆಡಿಎಸ್ ನಾವೇನು ಹೊರತಲ್ಲ ಎಂಬಂತೆ ಬಿಜೆಪಿ ಟಿಕೇಟ್ ಪ್ರಮುಖ ಆಕಾಂಕ್ಷಿಯಾಗಿದ್ದ ಕೋಡಿಹಳ್ಳಿ ಭೀಮಣ್ಣ ಕಮಲ ಟಿಕೇಟ್ ಕಾಂಗ್ರೇಸ್ ನಿಂದ ಇತ್ತೀಚಿಗೆ ಪಕ್ಷಾಂತರ ಮಾಡಿದ ಲೋಕೇಶ ನಾಯಕಗೆ ವರಿಷ್ಠರು  ಬಿಜೆಪಿ ಟಿಕೇಟ್ ನೀಡಿದ್ದರಿಂದ ಬೇಸರ ವ್ಯಕ್ತಪಡಿಸಿ ಕೊನೆ ಘಳಿಗೆಯಲ್ಲಿ ನಾಮಪತ್ರ ಸಲ್ಲಿಕೆಗೆ ಒಂದೆರಡು ದಿನದಲ್ಲಿ ಕಮಲ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಅಲ್ಲದೆ ಜೆಡಿಎಸ್ ಪಕ್ಷದ ಟಿಕೇಟ್ ಪಡೆದು ಸ್ಪರ್ಧೆಗಿಳಿದಿದ್ದಾರೆ.
ಈ ಮೂವರು ಕಾಂಗ್ರೇಸ್ , ಜೆಡಿಎಸ್ ಹಾಗೂ ಬಿಜೆಪಿ ಪ್ರಮುಖ ಪಕ್ಷದ ಮುಖಂಡರುಗಳಾಗಿ ಟಿಕೇಟ್ ಆಕ್ಷಾಂಕ್ಷಿಗಳಾಗಿ ಪಕ್ಷದಿಂದ ಟಿಕೇಟ್ ವಂಚಿತರಾಗಿದ್ದರಿಂದ ವರಿಷ್ಠರ ನಡೆಗೆ ಬೇಸತ್ತು ಪಕ್ಷಾಂತರವಾಗುವ ಮೂಲಕ ಟಿಕೇಟ್ ಪಡೆದು ಈಗ ಕೂಡ್ಲಿಗಿ ಕ್ಷೇತ್ರದ ವಿಧಾನಸಭಾ ಚುನಾವಣೆಯ ಪ್ರಮುಖ ಪ್ರತಿಸ್ಪರ್ದಿಗಳಾಗಿ ಕಣಕ್ಕಿಳಿದಿದ್ದಾರೆ  ಆದರೆ ಜಯದ ಮಾಲೆ ಯಾರ ಕೊರಳಿಗೆ ಬೀಳುವುದೋ ಮತದಾರ ಪ್ರಭು ಯಾರಿಗೆ ಮತ ಹಾಕಿ ಗೆಲ್ಲಿಸಿ ಕಳುಹಿಸುತ್ತಾನೋ ಕಾದು ನೋಡಲು ಮೇ 10ರಂದು ಮತದಾನ ನಂತರ ಮೇ 13 ಫಲಿತಾಂಶವನ್ನು ಕಾಯಬೇಕಿದೆ.