ಪಕ್ಷವನ್ನು ಬಲಪಡಿಸಲು ಸಂಘಟನಾತ್ಮಕ ಸಭೆಗಳು ಅತಿಅವಶ್ಯಕ – ಬೆಲ್ಲದ

ಹುಬ್ಬಳ್ಳಿ,ಏ9: ಮಹಾನಗರದಲ್ಲಿ ಪಕ್ಷದ ವಿವಿಧ ಪ್ರಕೋಷ್ಠಗಳು ಹಾಗೂ ಮೋರ್ಚಾಗಳ ಕಾರ್ಯಗಳು ಮುಖ್ಯವಾಗಿದ್ದು, ಈ ಪ್ರತಿಯೊಂದಕ್ಕೂ ಉಸ್ತುವಾರಿಗಳನ್ನು ನೇಮಿಸಿದ್ದು, ಹೆಚ್ಚೆಚ್ಚು ಸಂಘಟನಾತ್ಮಕ ಸಭೆಗಳು ನಡೆಯಬೇಕು. ಉಸ್ತುವಾರಿಗಳು ಸಭೆಗಳನ್ನು ಆಯೋಜಿಸುವ ಮೂಲಕ ಎಲ್ಲ ಮಂಡಲಗಳಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾ ಅಧ್ಯಕ್ಷ ಹಾಗೂ ಶಾಸಕರಾದ ಅರವಿಂದ ಬೆಲ್ಲದ ತಿಳಿಸಿದರು.
ದೇಶಪಾಂಡೆ ನಗರದ ಹು-ಧಾ ಮಹಾನಗರ ಜಿಲ್ಲಾ ಭಾಜಪ ಪಕ್ಷದ ಕಾರ್ಯಾಲಯದಲ್ಲಿ ಮಹಾನಗರ ಜಿಲ್ಲಾ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಪ್ರತಿಯೊಂದು ಮಂಡಲದಲ್ಲಿ ಇಂತಹ ಸಭೆಗಳು ನಡೆಯುವದರಿಂದ ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ನೆರವಾಗುತ್ತದೆ ಹಾಗೂ ನಿಮ್ಮ ನಾಯಕತ್ವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗಳಿಗೆ ನಾವೆಲ್ಲರೂ ಸಂಘಟನಾತ್ಮಕವಾಗಿ ಪ್ರತಿ ವಾರ್ಡಗಳಲ್ಲಿ ಸಜ್ಜಾಗಬೇಕಿದೆ ಎಂದು ತಿಳಿಸಿದರು.
ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಹಾಗೂ ವಿಭಾಗೀಯ ಪ್ರಭಾರಿಗಳಾದ ಲಿಂಗರಾಜ ಪಾಟೀಲ ಮಾತನಾಡಿ, ಪಕ್ಷದ ಚಟುವಟಿಕೆಗಳು ನಿರಂತರವಾಗಿರಬೇಕು. ಎಷ್ಟೊ ಜನರು ಪಕ್ಷದಲ್ಲಿ ಪದಾಧಿಕಾರಿಗಳಾಗಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ನಿಮಗೆಲ್ಲರಿಗೆ ಸಿಕ್ಕ ಅವಕಾಶ ಯಶಸ್ವಿಯಾಗಿ ನಿರ್ವಹಿಸಬೇಕು. ಮುಂಬರುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯ ದೃಷ್ಟಿಯಿಂದ ಎಲ್ಲ ಪದಾಧಿಕಾರಿಗಳು 82 ವಾರ್ಡಗಳಲ್ಲಿ ಕನಿಷ್ಠ ಪಕ್ಷ 72 ಸ್ಥಾನಗಳನ್ನು ಪಡೆಯಲು ಪ್ರಯತ್ನವನ್ನು ಮಾಡಬೇಕೆಂದು ಲಿಂಗರಾಜ ಪಾಟೀಲ ಸಭೆಯಲ್ಲಿ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಈ ಸಭೆಯ ಪೂರ್ವದಲ್ಲಿ ಮಾಜಿ ಮಹಾಪೌರರಾದ ದಿ: ಸುಧೀರ ಸರಾಫ ಹಾಗೂ ಮಹಾನಗರ ಜಿಲ್ಲಾ ಉಪಾಧ್ಯಕ್ಷರಾಗಿದ್ದ ದಿ : ಶಂಕರಪ್ಪ ಛಬ್ಬಿ ಯವರ ನಿಧನಕ್ಕೆ ಸಂತಾಪ ಸೂಚಿಸಿ 2 ನಿಮಿಷಗಳ ಕಾಲ ಮೌನ ಆಚರಿಸಿ ಅಗಲಿದ ಪಕ್ಷದ ಮುಖಂಡರನ್ನು ಸ್ಮರಿಸಲಾಯಿತು.
ಈ ಸಭೆಯಲ್ಲಿ ವಿಭಾಗ ಸಹ-ಸಂಘಟನಾ ಕಾರ್ಯದರ್ಶಿ ರಾಜಕುಮಾರ ಬಸವಾ, ಹು-ಧಾ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಾನಂದ ಶೆಟ್ಟಿ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ಜಿಲ್ಲಾ ವಕ್ತಾರರಾದ ರವಿ ನಾಯ್ಕ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಬಸವರಾಜ ಗರಗ, ಈರಣ್ಣ ಹಪ್ಪಳಿ, ಕೃಷ್ಣಾ ಗಂಡಗಾಳೆಕರ, ವಸಂತ ನಾಡಜೋಶಿ, ಸಿದ್ದು ಕಲ್ಯಾಣಶೆಟ್ಟಿ, ವಿಶ್ವನಾಥ ಪಾಟೀಲ, ಮುರಗೇಶ ಹೊರಡಿ, ಅನಸೂಯಾ ಹಿರೇಮಠ, ಸುಜಾತಾ ಕಳ್ಳಿಮನಿ, ಪೂರ್ಣಿಮಾ ಶಿಂಧೆ, ಪ್ರಮಿಳಮ್ಮಾ ಕೋಟಾರಿ ಮೊದಲಾದವರು ಉಪಸ್ಥಿತರಿದ್ದರು.