ಪಕ್ಷವನ್ನು ಅಭದ್ರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ: ನಾರಾಯಣಗೌಡ

ಕೆ.ಆರ್.ಪೇಟೆ, ನ.12: ಇನ್ನೂ 25 ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತ ನಡೆಸಲಿದೆ, ಈ ಪಕ್ಷವನ್ನು ಅಭದ್ರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ತಿಳಿಸಿದರು.
ಅವರು ಪಟ್ಟಣದ ಯಶಸ್ವಿನಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಪ್ರಶಿಕ್ಷಣ ವರ್ಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ದೇಶಸೇವೆ ಹೇಗೆ ಮಾಡಬೇಕು ಎಂಬುದನ್ನು ಬೇರೆ ಪಕ್ಷಗಳು ನರೇಂದ್ರಮೋದಿಯವರನ್ನು ನೋಡಿ ಕಲಿಯಬೇಕು, ಸದಾ ದೇಶದ ಚಿಂತನೆಯೇ ಪ್ರಮುಖವಾಗಿದ್ದು ಸರಳ ಜೀವನ ನಡೆಸಿ ದೇಶದ ಅಭಿವೃದ್ದಿಗಾಗಿ ನಾನಾ ಯೋಜನೆಗಳನ್ನು ಜಾರಿಗೊಳಿಸಿ ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಬರಲು ಕಾರಣಕರ್ತರಾಗಿದ್ದಾರೆ, ಅವರು ಯೋಗ,ಧ್ಯಾನ, ಆಹಾರಪದ್ದತಿಯಿಂದಾಗಿ ಅಷ್ಟು ವಯಸ್ಸಾದರೂ ದಣಿವರಿಯದಂತೆ ಕೆಲಸ ನಿರ್ವಹಿಸುತ್ತಿದ್ದಾರೆ, ಅವರು ಕೇವಲ 4-5 ಗಂಟೆಗಳು ಮಾತ್ರ ನಿದ್ರೆ ಮಾಡುತ್ತಾರೆ. ಉಳಿಕೆ ಅವಧಿ ದೇಶದ ಅಭಿವೃದ್ದಿಗೆ ಕೆಲಸ ಮಾಡುತ್ತಿದ್ದು ರಾಜ್ಯದಲ್ಲಿಯೂ ಯಡಿಯೂರಪ್ಪನವರು ಹಗಲು ರಾತ್ರಿ ಎನ್ನದೇ ರಾಜ್ಯದ ಅಭ್ಯುದಯಕ್ಕೆ ಕೆಲಸ ಮಾಡುತ್ತಿದ್ದಾರೆ,
ಬಿಜೆಪಿ ಪಕ್ಷ ಹಣ ಬಲದಿಂದ ಅಧಿಕಾರಕ್ಕೆ ಬಂದಿಲ್ಲ, ಜನರ ಆಶೋತ್ತರಗಳನ್ನು ಈಡೇರಿಸಲು, ಜನರ ನಿರೀಕ್ಷೆಗೆ, ಅಭಿರುಚಿಗೆ ತಕ್ಕಂತೆ ಪಕ್ಷ ಕೆಲಸ ನಿರ್ವಹಿಸುತ್ತಿದೆ. ನಮ್ಮ ತಾಲ್ಲೂಕಿನ ಅಭಿವೃದ್ದಿಗಾಗಿ ಸಾವಿರ ಕೋಟಿಗಳ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದು, ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಪಣ ತೊಟ್ಟು ಕೆಲಸ ಮಾಡುತ್ತಿದ್ದೇನೆ ಮುಂದಿನ ದಿನಗಳಲ್ಲಿ ಜಿಲ್ಲೆಯನ್ನು ಕಮಲಮಯ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಉಸ್ತುವಾರಿ ಕೃಷ್ಣೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಮೋಹನ್, ಸಿದ್ದರಾಜು, ಸದಾನಂದ, ತಾಲ್ಲೂಕು ಅದ್ಯಕ್ಷ ಪರಮೇಶ್, ಮೂಡ ಅದ್ಯಕ್ಷ ಕೆ.ಶ್ರೀನಿವಾಸ್, ರೈತಮೊರ್ಚ ಅದ್ಯಕ್ಷ ಶಿವರಾಮೇಗೌಡ, ಸಾಮಾಜಿಕ ಜಾಲತಾಣದ ಮಂಜುನಾಥ್ ಗೌಡ, ಜಿಲ್ಲಾ ವಕ್ತಾರ ಕೆ.ಕಾಳೇಗೌಡ, ಕರ್ತೇನಹಳ್ಳಿ ಸುರೇಶ್, ಸಾರಂಗಿ ನಾಗರಾಜು, ರವಿ, ಸೇರಿದಂತೆ ಹಲವರು ಹಾಜರಿದ್ದರು.