ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಭೇಟಿ ನಂತರ ನಿರ್ಧಾರ: ಶೆಟ್ಟರ್

ಹುಬ್ಬಳ್ಳಿ, ಏ12: ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದ ನಂತರ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ....' ಇದು ಈಗಾಗಲೇ ಹರಡಿರುವಜಗದೀಶ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ಇಲ್ಲ’ ಎಂಬ ಸುದ್ದಿಯ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಚುಟುಕಾಗಿ, ಅಷ್ಟೇ ದೃಢವಾಗಿ ಶೆಟ್ಟರ್ ನೀಡಿದ ಹೇಳಿಕೆ.
ಇಂದು ಮುಂಜಾನೆ ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿದ್ದರಿಂದ ದೆಹಲಿಗೆ ಹೋಗುತ್ತಿದ್ದೇನೆ, ಸಕಾರಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆಯಿದೆ, ಪಕ್ಷದ ದೃಷ್ಟಿಯಿಂದ
ಒಳ್ಳೆಯದಾಗುವುದೆಂದು ಹೊರಟಿದ್ದೇನೆ ನೋಡೋಣ ಎಂದು ನುಡಿದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈತಪ್ಪುವ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಯಾವುದೇ ಸ್ಥಾನಮಾನವಿಲ್ಲದೇ ಎರಡು ವರ್ಷದಿಂದ ಪಕ್ಷದಲ್ಲಿ ಇದ್ದೇನೆ, ಯಾವುದೇ ಅಧಿಕಾರವಿಲ್ಲದೇ ಪಕ್ಷದ ಸಂಘಟನೆ ಮಾಡಿದ್ದೇನೆ, ನನ್ನ ಸಾಫ್ಟ್‍ಕಾರ್ನರ್ ನನ್ನನ್ನು ಇಲ್ಲಿಯವರೆಗೆ ತಂದಿದೆ ಎಂದು ಅವರು ಗಂಭೀರವಾಗಿ ಹೇಳಿದರು.
ಹಿರಿತನದ ಹಿನ್ನೆಲೆಯಲ್ಲಿ ನಿವೃತ್ತಿ ವಿಷಯ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಹಿರಿತನವೆಂದರೆ ಏನು? ವಯಸ್ಸಿನಲ್ಲೋ? ರಾಜಕಾರಣದಲ್ಲೋ? ಎಂದು ಪ್ರಶ್ನಿಸಿದ ಅವರು, ಟಿಕೆಟ್ ಸಿಕ್ಕವರಲ್ಲಿ 75, 76 ವರ್ಷದವರು ಇದ್ದಾರೆ, ಅವರಿಗೆ ಸೀನಿಯರ್ಸ್ ಅನ್ನುವುದಿಲ್ಲವೇ? ಎಂದು ನುಡಿದರು.
ಯಾವುದೇ ಕಾರಣವಿರಲಿ ನಿವೃತ್ತಿ ಘೋಷಣೆಗೂ ನಾನು ಸಿದ್ಧನಿದ್ದೇನೆ ಆದರೆ ರಾಜಕಾರಣದಲ್ಲಿ ಗೌರವಯುತವಾಗಿ ಹೊರಗಡೆ ಹೋಗಬೇಕು ಆದರೆ ಈ ರೀತಿ ಪಕ್ಷದಿಂದ ಹೊರಗಡೆ ಹೋಗಬಾರದು ಎಂದು ತಮ್ಮ ತೀವ್ರ ಅಸಮಾಧಾನ ಹೊರಹಾಕಿದ ಶೆಟ್ಟರ್ ಅವರ ಧ್ವನಿಯ ಆಳದಲ್ಲಿ ನೋವಿನ ಎಳೆಯೂ ಇತ್ತು.
ಮೊದಲು ಯಡಿಯೂರಪ್ಪನವರನ್ನು ಭೇಟಿಯಾಗಬೇಕಿತ್ತು, ವಿಮಾನ ತಡವಾದ್ದರಿಂದ ನೇರವಾಗಿ ದೆಹಲಿಗೆ ಹೋಗುತ್ತಿದ್ದೇನೆ, ಅಲ್ಲಿಂದ ಬಂದ ನಂತರ ಅವರನ್ನು ಭೇಟಿಯಾಗುತ್ತೇನೆ ಎಂದು ಶೆಟ್ಟರ್ ತಿಳಿಸಿದರು.