ಪಕ್ಷದ ನೀತಿ, ನಿರ್ಧಾರಗಳಿಗೆ ಬದ್ಧ ಸಚಿವರುಗಳ ವ್ಯಾಖ್ಯಾನ


ಗಳೂರು, ಜು. ೨೨- ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಸುಳಿವು ನೀಡುತ್ತಿದ್ದಂತೆಯೇ ಹಲವು ಸಚಿವರುಗಳು ಹೈಕಮಂಡ್ ತೀರ್ಮಾನಕ್ಕೆ ಬದ್ಧ ಎಂಬ ಹೇಳಿಕೆಗಳನ್ನು ನೀಡಿ ಪಕ್ಷ ನಿಷ್ಠೆ ಮೆರೆದಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ನಾಯಕತ್ವ ಬದಲಾವಣೆ ಬಗ್ಗೆ ತಮಗೆ ಮಾಹಿತಿ ಇಲ್ಲ. ಹೈಕಮಾಂಡ್ ಯಾವ ನಿರ್ಧಾರ ಕೈಗೊಂಡಿದೆ ಎಂಬುದು ಗೊತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವರಿಷ್ಠರಿಗೆ ಮಾತ್ರ ಆ ವಿಚಾರ ಗೊತ್ತು. ಪಕ್ಷದ ನೀತಿ, ನಿಷ್ಠೆ ಪಾಲಿಸುವುದು ನಮ್ಮ ಬದ್ಧತೆ. ಮುಖ್ಯಮಂತ್ರಿಗಳೇ ವರಿಷ್ಠರ ಸೂಚನೆ ಪಾಲಿಸುವುದಾಗಿ ಹೇಳಿದ್ದಾರೆ ಎಂದರು.
ವಲಸಿಗರಲ್ಲ
ಅಬಕಾರಿ ಸಚಿವ ಗೋಪಾಲಯ್ಯ ವಿಧಾನಸೌಧದಲ್ಲಿಂದು ಮಾತನಾಡಿ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ತಾವು ವಲಸಿಗರಲ್ಲ. ಈಗ ಬಿಜೆಪಿಯವರು ಎಂದು ಹೇಳಿದರು.
ಬಿಎಸ್‌ವೈ ಹೈಕಮಾಂಡ್
ಸಚಿವ ನಾರಾಯಣಗೌಡ ಮಾತನಾಡಿ, ಯಡಿಯೂರಪ್ಪನವರೇ ನಮ್ಮ ಹೈಕಮಾಂಡ್. ಅಗತ್ಯಬಿದ್ದರೆ ದೆಹಲಿಗೆ ಹೋಗುತ್ತೇನೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜಗದೀಶ್‌ಶೆಟ್ಟರ್ ಹೇಳಿಕೆ
ನಾಯಕತ್ವ ಬದಲಾವಣೆ ಬಗ್ಗೆ ಏನು ಚರ್ಚೆಯಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಆ ಬಗ್ಗೆ ಮಾಹಿತಿಯೂ ಇಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಈಗಾಗಲೇ ನಾಯಕತ್ವ ಬದಲಾವಣೆ ಇಲ್ಲ ಎಂಬ ಮಾತುಗಳನ್ನು ಹೇಳಿದ್ದಾರೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ ಎಂದು ಸಚಿವ ಜಗದೀಶ್‌ಶೆಟ್ಟರ್ ಹೇಳಿದರು.
ಆತಂಕವಿಲ್ಲ
ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕೈಬಿಡುತ್ತೇವೆ ಎಂದು ಹೈಕಮಾಂಡ್ ಹೇಳಿಲ್ಲ. ಹೈಕಮಾಂಡ್‌ನ ತೀರ್ಮಾನಕ್ಕೆ ನಾವೆಲ್ಲಾ ಬದ್ಧ. ನಮಗಂತೂ ಯಾವುದೇ ಆತಂಕವಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಬಿಎಸ್‌ವೈ ಮೇಲೆ ವಿಶ್ವಾಸ
ಮುಖ್ಯಮಂತ್ರಿ ನಾಯಕತ್ವ ಬದಲಾವಣೆಯಂತಹ ಊಹಾಪೂಹಗಳಿಗೆ ತಾವು ಪ್ರತಿಕ್ರಿಯಿಸುವುದಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ವರಿಷ್ಠರು ಎಲ್ಲ ಆಯಾಮಗಳನ್ನು ಗಮನಿಸಿ ಎಲ್ಲರ ಅಭಿಪ್ರಾಯ ಪಡೆದು ಯಡಿಯೂರಪ್ಪನವರ ಜತೆ ಮಾತನಾಡಿಯೇ ಎಲ್ಲವನ್ನು ನಿರ್ಧರಿಸುತ್ತಾರೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ ಪಕ್ಷ ಗೆಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಠಾಧೀಶರು ಬೆಂಬಲ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ಮುಖ್ಯಮಂತ್ರಿಗಳ ಸೇವೆಯ ಫಲ. ಮಠಾಧೀಶರು ರಾಜ್ಯ ಮತ್ತು ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಲಹೆ, ಸೂಚನೆ ಕೊಟ್ಟಿದ್ದಾರೆ ಎಂದರು.
ಶ್ರೀರಾಮುಲು ಹೇಳಿಕೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಮಗೆ ಗೊತ್ತಿಲ್ಲ. ದೆಹಲಿಗೆ ಇಲಾಖೆಯ ಕೆಲಸಗಳ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಲು ತೆರಳಿದ್ದೆ ಎಂದು ಸಚಿವ ಶ್ರೀರಾಮುಲು ಹೇಳಿದರು.