ಪಕ್ಷದ ಒಟ್ಟು ವ್ಯವಸ್ಥೆ ಕೋವಿಡ್ ನಿರ್ವಹಣೆಗೆ ಸಮರ್ಪಣೆ

ಸುಳ್ಯ, ಜೂ.೪- ಈಗ ಯಾವುದೇ ರಾಜಕೀಯ ಚಟುವಟಿಕೆಗಳು ಇಲ್ಲ. ಪಕ್ಷದ ಒಟ್ಟು ವ್ಯವಸ್ಥೆಯನ್ನು ಪೂರ್ತಿಯಾಗಿ ಕೋವಿಡ್ ನಿರ್ವಹಣೆಗೆ ಸಮರ್ಪಣೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದ್ದಾರೆ.
ಅವರು ಸುಳ್ಯದ ಸಚಿವರ ವಾರ್ ರೂಂಗೆ ಭೇಟಿ ನೀಡಿ ಮಾತನಾಡಿದರು ಕೋವಿಡ್ ಒಂದನೇ ಅಲೆ ಮತ್ತು ಎರಡನೇ ಅಲೆ ಜನರಿಗೆ ಸಂಕಷ್ಟ ತಂದಾಗ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಅಧ್ಯಕ್ಷರ ಸೂಚನೆಯ ಮೇರೆಗೆ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಸಂಘ ಪರಿವಾರ ಕಾರ್ಯಕರ್ತರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳು, ಕಂಪೆನಿಗಳು, ಧಾರ್ಮಿಕ ಕ್ಷೇತ್ರಗಳು ಪಕ್ಷದ ಜೊತೆ ಕೈ ಜೋಡಿಸಿ ಕೆಲಸ ಮಾಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇರುವ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಜವಬ್ದಾರಿ ಹೆಚ್ಚು ಇದೆ. ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಪ್ರತಿ, ಗ್ರಾಮ ಪಂಚಾಯಿತಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಾ ಇದ್ದಾರೆ. ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ದೇಶದಲ್ಲಿ ಕೋವಿಡ್ ವ್ಯಾಕ್ಸಿನ್ ನೀಡಲು ಸಾಧ್ಯವಾಗಿದೆ. ಆರಂಭದಲ್ಲಿ ವ್ಯಾಕ್ಸಿನ್ ಬಗ್ಗೆ ವಿರೋಧ ಪಕ್ಷಗಳು ಸೇರಿ ಅಪಪ್ರಚಾರ ಮಾಡಿದ ಕಾರಣ ಸ್ವಲ್ಪ ನಿಧಾನ ಆಯಿತು.ಮುಂದಿನ ಕೆಲವೇ ತಿಂಗಳಲ್ಲಿ ದೇಶದ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತದೆ. ಅತೀ ಹೆಚ್ಚು ಭೂಭಾಗ ಮತ್ತು ಜನ ಸಂಖ್ಯೆ ಇರುವ ಕಾರಣ ಸ್ವಲ್ಪ ನಿಧಾನ ಆಗುವುದು ಸಹಜ. ಕೋವಿಡ್ ಸಂದರ್ಭವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಶಸ್ವಿಯಾಗಿ ನಿರ್ವಹಿಸುತಿದೆ. ಎಲ್ಲರ ಸಹಾಕರದಿಂದ ಮತ್ತು ಪ್ರಯತ್ನದಿಂದ ಕೋವಿಡ್ ಸೋಂಕಿನ ಮಹಾ ಮಾರಿಯಿಂದ ದೇಶ ಸದ್ಯದಲ್ಲಿಯೇ ಹೊರ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಸುಳ್ಯ ಮಂಡಲದಲ್ಲಿ ಕಾರ್ಯಕರ್ತರು ಕೋವಿಡ್ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ಕುರಿತು ಪಕ್ಷದ ಕಾರ್ಯಕರ್ತರ ಜೊತೆ ಮಾತನಾಡಲು ಮತ್ತು ಚಟುವಟಿಕೆಗಳ ಮಾಹಿತಿ ಪಡೆಯಲು ಆಗಮಿಸಿದ್ದಾಗಿ ಅವರು ಹೇಳಿದರು.
ಸಚಿವ ಅಂಗಾರ ಅವರ ನೇತೃತ್ವದಲ್ಲಿ ಆಡಳಿತಾತ್ಮಕವಾಗಿಯೂ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆ ಚೆನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಬಳಿಕ ಪಕ್ಷದ ವತಿಯಿಂದ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಪಕ್ಷದ ವತಿಯಿಂದ ಮತ್ತು ಸಂಘ ಪರಿವಾರದ ಕಡೆಯಿಂದ ಕೋವಿಡ್ ನಿರ್ವಹಣೆಯ ಬಗ್ಗೆ ನಡೆಸುತ್ತಿರುವ ಸೇವಾ ಕಾರ್ಯಗಳ ಬಗ್ಗೆ ಅವರು ಮಾಹಿತಿ ಪಡೆದರು. ಪ್ರತಿ ದಿನದ ಕಾರ್ಯ ಚಟುವಟಿಕೆಗಳ ಬಗ್ಗೆ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು. ಲಾಕ್ ಡೌನ್ ಸಂದರ್ಭದ ಕ್ಷೇತ್ರದ ಸ್ಥಿತಿಗತಿ, ಸುಳ್ಯ ವಿಧಾನಸಭಾ ಕ್ಷೇತ್ರದ ಕೋವಿಡ್ ಪಾಸಿಟಿವ್ ಸಂಖ್ಯೆ, ಕೋವಿಡ್ ಕೇರ್ ಕೇಂದ್ರದ ವ್ಯವಸ್ಥೆ ಬಗ್ಗೆ, ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ, ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆಗಳ ಬಗ್ಗೆ ಮತ್ತು ವ್ಯಾಕ್ಸಿನೇಷನ್ ಪ್ರಗತಿಯ ಅವರು ಮಾಹಿತಿ ಪಡೆದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಂದಾಸ್ ಬಂಟ್ವಾಳ್, ವಿಕಾಸ್ ಪುತ್ತೂರು ಅಧ್ಯಕ್ಷರ ಜೊತೆಗಿದ್ದರು. ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ನ.ಪಂ.ಸದಸ್ಯ ಸುಧಾಕರ, ಜಿನ್ನಪ್ಪ ಪೂಜಾರಿ ಜಿಲ್ಲಾಧ್ಯಕ್ಷರಿಗೆ ಮಾಹಿತಿ ನೀಡಿದರು. ಚಂದ್ರಶೇಖರ ನೆಡಿಲು, ಲಕ್ಷ್ಮಣ ಕೇರ್ಪಳ, ಮಧುಕಿರಣ ಕೊಡಿಯಾಲಬೈಲು, ಚಂದ್ರಶೇಖರ ಪೂಜಾರಿ ಜಟ್ಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.