
ಬೆಂಗಳೂರು,ಏ.೩:ಚುನಾವಣೆಯಲ್ಲಿ ಯಾರನ್ನೇ ಅಭ್ಯರ್ಥಿಯನ್ನಾಗಿ ನಿಲ್ಲಿಸಿದರೂ ಅವರ ಗೆಲುವಿಗೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ರಾಜ್ಯ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕಿ ಹಾಗೂ ಕೇಂದ್ರ ಸಚಿವ ಶೋಭಾಕರಂದ್ಲಾಜೆ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ನಡೆದ ರಾಜ್ಯ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪಕ್ಷ ಯಾರನ್ನು ಅಭ್ಯರ್ಥಿ ಮಾಡುತ್ತೋ ಅವರೇ ನಮ್ಮ ನೇತಾರ. ಇಂತಹವರಿಗೆ
ಟಿಕೆಟ್ ಕೊಟ್ಟರೆ ಮಾತ್ರ ಕೆಲಸ ಮಾಡುತ್ತೇವೆ ಎನ್ನುವ ಮಾತುಗಳು ಬೇಡ, ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೊ ಅವರ ಪರ ಕೆಲಸ ಮಾಡಿ ಕಾರ್ಯಕರ್ತರಿಗೆ ಕರೆ ನೀಡಿದರು.
ಸೈನಿಕರು ಯುದ್ಧ ಮಾಡುವಾಗ ಇಂತಹವರೇ ಸೇನಾಧಿಪತಿಯಾಗಬೇಕು ಎಂದು ಯುದ್ಧ ಮಾಡುವುದಿಲ್ಲ. ಹಾಗೆಯೇ ಪಕ್ಷ ಗುರುತಿಸುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬನ್ನಿ. ಏನೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತನ್ನಿ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲು ಚುನಾವಣಾ ಕಚೇರಿ ಮಾಡಿ, ಅಭ್ಯರ್ಥಿ ಪರ ಕೆಲಸ ಮಾಡಿ. ಯಾವುದೇ ನೆಗೆಟೀವ್ ಅಂಶಗಳು ವಿರೋಧ ಪಕ್ಷಗಳ ಪ್ರಚಾರಕ್ಕೆ ಆಹಾರವಾಗದಂತೆ ಎಚ್ಚರವಹಿಸಿ ಎಂದರು.
ಕಾಂಗ್ರೆಸ್ ಮುಕ್ತ
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಮುಕ್ತ ಆಗಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರ ಹಿಡಿಯಲಿದೆ ಎಂದರು.
ಕಳೆದ ೨ ದಿನಗಳಿಂದ ೨೨೪ ಕ್ಷೇತ್ರಗಳ ಶಕ್ತಿ ಕೇಂದ್ರಕ್ಕೆ ಕಾರ್ಯಕರ್ತರ ಸಭೆ ಮಾಡಿ, ಅಭಿಪ್ರಾಯ ಸಂಗ್ರಹಿಸಿದ್ದೇವೆ. ಅಭ್ಯರ್ಥಿ ಯಾರೇ ಆದರೂ ಒಮ್ಮತದಿಂದ ಕೆಲಸ ಮಾಡುವ ಅಭಿಪ್ರಾಯ ಬಂದಿದೆ. ಡಬಲ್ ಇಂಜಿನ್ ಸರ್ಕಾರದ ಸಾಧನೆಗಳು ಜನರ ಮನೆ ಮನೆ ತಲುಪಿವೆ. ಬಿಜೆಪಿ ಗೆಲುವು ನಿಶ್ಚಿತ ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರದಾನ್., ಸಹ ಉಸ್ತುವಾರಿ ಅಣ್ಣಾಮಲೈ ಸೇರಿದಂತೆ ಹಲವು ಪ್ರಮುಖ ಮುಖಂಡರು ಭಾಗಿಯಾಗಿದ್ದರು.