
ಕೋಲಾರ,ಏ,೬- ಮುಖಂಡರನ್ನು ಆಮಿಷವೊಡ್ಡಿ, ಆಪರೇಷನ್ ಮಾಡಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಭ್ರಮೆಯಲ್ಲಿದ್ದ ವಿರೋಧಿಗಳಿಗೆ ಈಗ ಭ್ರಮನಿರಶನವಾಗಿದೆ. ಎಲ್ಲಾ ತಂತ್ರಗಾರಿಕೆ ವಿಫಲವಾಗಿವೆ. ಜೆಡಿಎಸ್ ಎಷ್ಟು ಬಲಿಷ್ಠವಾಗಿದೆ ಎಂಬುದು ವಿರೋಧಿಗಳಿಗೆ ಅರ್ಥವಾಗಿದೆ ಎಂದು ಕೋಲಾರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ತಿಳಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪಕ್ಷದಲ್ಲಿ ಸಣ್ಣಪುಟ್ಟ ಮುನಿಸು, ವೈಮನಸ್ಯ, ವ್ಯತ್ಯಾಸ ಸಹಜ. ಏಕೆಂದರೆ ನಮ್ಮದು ದೊಡ್ಡ ಪಕ್ಷ. ಕುರ್ಕಿ ರಾಜೇಶ್ವರಿ ತಮ್ಮ ಭಾವನೆ, ನೋವು ಹೇಳಿಕೊಂಡಿದ್ದಾರೆ. ಅವರ ಜೊತೆ ನಾಲ್ಕೈದು ಗಂಟೆ ಚರ್ಚಿಸಿದ್ದೇವೆ. ಪಕ್ಷದ ವರಿಷ್ಠರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷರಾಗಿರುವ ರಾಜೇಶ್ವರಿ ಅವರಿಗೆ ಪಕ್ಷ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅವರ ಅಭಿಪ್ರಾಯ, ಸಲಹೆ?ಸೂಚನೆ ಪಡೆದುಕೊಂಡು ಸಭೆ ನಡೆಸುತ್ತಿದ್ದೇವೆ. ೧೮ ವರ್ಷ ಪಕ್ಷಕ್ಕೆ ದುಡಿದಿದ್ದಾರೆ. ಅವರನ್ನು ಬಿಟ್ಟು ಪಕ್ಷ ಕಾರ್ಯಕ್ರಮ ಮಾಡಿಲ್ಲ. ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ಮಾಡಿಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನವರು ಈಗಾಗಲೇ ಹಾಲಿ ಶಾಸಕರನ್ನೇ ಹೈಜಾಕ್ ಮಾಡಿದ್ದಾರೆ. ಹಣ ನೀಡುವ, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಆಮಿಷವನ್ನು ಅವರಿಗೆ ನೀಡಿದ್ದಾರೆ. ರಾಜೇಶ್ವರಿ ವಿಚಾರದಲ್ಲಿ ಆ ರೀತಿ ಆಗುವುದಿಲ್ಲ ಎಂಬುದು ನನ್ನ ಭಾವನೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದರು.
ಕೋಲಾರದ ಸ್ಥಳೀಯ ವ್ಯಕ್ತಿ ಆಗಿರುವ, ಸ್ವಾಭಿಮಾನಿ ಆಗಿರುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ಹೆಚ್ಚಿನ ಮತಗಳಿಂದ ಗೆಲ್ಲುವ ಭರವಸೆ ಇದೆ. ಹಿಂದೆ ೪೬ ಸಾವಿರ ಮತಗಳಿಂದ ಗೆದ್ದಿದ್ದರು ಎಂದು ಹೇಳಿದರು.