ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ:ಶ್ರೀರಾಮುಲು

ಬಳ್ಳಾರಿ, ಏ.04: ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಇಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ನಗರದ ಕೌಲ್ ಬಜಾರ್ ಪ್ರದೇಶದ ಬಂಡಿಹಟ್ಟಿ, ರಾಮಾಂಜಿನೇಯ ನಗರ, ವಟ್ಟಪ್ಪಗೇರಿ ಮೊದಲಾದೆಡೆ ಸಭೆಗಳನ್ನು ನಡೆಸಿ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಇದು ನಿಮ್ಮ ಚುನಾವಣೆ ನೀವೆಲ್ಲ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ಅವರು ಇಂದು ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ, ಮಾಜಿ ಸದಸ್ಯರಾದ ಸಣ್ಣ ಪಕ್ಕೀರಪ್ಪ, ಜೆ.ಶಾಂತ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ, ಪಕ್ಷದ ಜಿಲ್ಲಾ ಅಧ್ಯಕ್ಷ ಚನ್ನಬಸನಗೌಡ, ಮುಖಂಡರುಗಳಾದ ಎ.ಎಂ.ಸಂಜಯ್, ಗೋವಿಂದರಾಜುಲು, ಗೌಳಿ ಶಂಕ್ರಪ್ಪ, ಶಶಿಕಲಾ, ನೂರ್ ಬೈ, ಡಿ.ವಿನೋದ್, ಹೊನ್ನೂರುಸ್ವಾಮಿ, ವೆಂಕಟೇಶ್, ಸಂಜಯ್ ಬೆಟಗೇರಿ ಮೊದಲಾದವರೊಂದಿಗೆ ವಿವಿಧೆಡೆ ಸಭೆ ನಡೆಸಿ ಈ ಬಾರಿ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಪಡೆದರು.
ನಮಗೆಲ್ಲ ಮುಂದಿನ ಚುನಾವಣೆಗಳಿಗೆ ಪಾಲಿಕೆ ಬುನಾದಿ, ಕಾರ್ಯಕರ್ತರೇ ಇಲ್ಲಿ ಸ್ಪರ್ಧಿಗಳಾಗಿರುವುದರಿಂದ ನಿಮ್ಮ ಗೆಲುವಿಗೆ ನಮ್ಮ ಎಲ್ಲ ಶ್ರಮ ಹಾಕುತ್ತೇವೆ. ಟಿಕೆಟ್ ಒಬ್ಬರಿಗೇ ನೀಡುವುದರಿಂದ ಇತರರು ಬೇಸರಗೊಳ್ಳದೆ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಮುಂದಾಗಿ ಎಂದರು.
ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಮಾತನಾಡಿ, ಮುಖ್ಯವಾಗಿ ಮತದಾನ ಮಾಡಲು ಮತದಾರರಿಗೆ ಹೆಚ್ಚಿನ ಜಾಗೃತಿ ಮೂಡಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು ಇಲ್ಲಿನ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಗರದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಆಗಲಿದೆ. ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡದೆ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಪಣ ತೊಡಬೇಕೆಂದರು.