ಪಂ.ರಾಜೇಂದ್ರಸಿಂಗ್ ಪವಾರ ಪಂಚಾಕ್ಷರ ಪ್ರಶಸ್ತಿಗೆ ಆಯ್ಕೆ

ಬೀದರ :ಜ.18: ಪಂ.ರಾಜೇಂದ್ರಸಿಂಗ್ ಪವಾರ ಶ್ರೇಷ್ಠ ಹಾರ್ಮೋನಿಯಂ ವಾದಕರಿಗೆ 2022-23 ಸಾಲಿನ ಪಂಚಾಕ್ಷರ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಇಂದು ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಪದಾಧಿಕಾರಿಗಳಾದ ಪ್ರೊ.ದೇವೇಂದ್ರ ಕಮಲ , ಪ್ರೊ.ಎಸ್.ವಿ.ಕಲ್ಮಠ , ದಾನಿ ಬಾಬುರಾವ , ಡಾ.ಬಿ.ಎಸ್.ಬಿರಾದಾರ ,ವೀರಭದ್ರಪ್ಪ ಉಪ್ಪಿನ ಹಾಗು ನಾರಾಯಣರಾವ ಕಾಂಬಳೆ ಅವರು ಪಂ.ರಾಜೇಂದ್ರಸಿಂಗ್ ಪವಾರ ಅವರ ಮನೆಗೆ ಹೋಗಿ ಸಂಘದ ವತಿಯಿಂದ ಪ್ರಶಸ್ತಿ ಸ್ವೀಕರಿಸುವಂತೆ ಕೋರಿ ಅವರಿಗೆ ಸನ್ಮಾನಿಸಿ ಆಹ್ವಾನ ಪತ್ರ ನೀಡಲಾಯಿತು.
ನಾಲ್ಕು ದಶಕಗಳಿಂದ ಅಧಿಕ ಅವಧಿ ಪಂ.ರಾಜೇಂದ್ರಸಿಂಗ್ ಪವಾರ ನಿರಂತರ ಸಂಗೀತ ಸೇವೆ ಮಾಡುತ್ತಿದ್ದಾರೆ. ಹಂಪಿ ಉತ್ಸವ ಒಳಗೊಂಡು ಅನೇಕ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸಂಗೀತ ಸಮ್ಮೇಳನಗಳಲ್ಲಿ ಹಾರ್ಮೋನಿಯಂ ಸೊಲೊ , ಸಾಥ ಮತ್ತು ಸಿತಾರ ,ಸಾರಂಗಿ ,ತಬಲಾ ಮುಂತಾದ ವಾದ್ಯಗಳೊಂದಿಗೆ ಜುಗಲ್ ಬಂದಿ ಕಾರ್ಯಕ್ರಮ ನೀಡಿರುತ್ತಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗು ಪುರಸ್ಕಾರಗಳು ಅವರಿಗೆ ಲಭಿಸಿವೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರಾಗಿ ಅವರು ಸೇವೆ ಸಲ್ಲಿಸಿರುತ್ತಾರೆ.
ಡಾ.ಚನ್ನವೀರ ಶಿವಾಚಾರ್ಯರ ಕೃಪಾಶೀರ್ವಾದಯುಕ್ತವಾಗಿ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ,ಬೀದರ ಹಾಗು ಕನ್ನಡ ಮತ್ತು ಸಂಸ್ಕøತಿ ಇಲಾಖೆ,ಬೀದರ ಇವರ ಸಂಯುಕ್ತಾಶ್ರಯದಲ್ಲಿ ಲಿಂ.ಪಂ.ಪಂಚಾಕ್ಷರ ಗವಾಯಿ ಅವರ 78ನೇ ಪುಣ್ಯತಿಥಿ ಹಾಗು ಲಿಂ.ಡಾ.ಪಂ.ಪುಟ್ಟರಾಜ ಕವಿಗವಾಯಿ ಅವರ 12ನೇ ಪುಣ್ಯತಿಥಿ ಅಂಗವಾಗಿ ದಿನಾಂಕ 27.01.2023ರಂದು ಸುಕ್ಷೇತ್ರ ಹಾರಕೂಡದಲ್ಲಿ ಆಯೋಜಿಸುವ ಕರ್ನಾಟಕ ರಾಜ್ಯ ಮಟ್ಟದ ಸಂಗೀತ, ಸಾಹಿತ್ಯ ಮತ್ತು ನೃತ್ಯೋತ್ಸವ ಸಮ್ಮೇಳನದಲ್ಲಿ ಪಂ.ರಾಜೇಂದ್ರಸಿಂಗ್ ಪವಾರ ಅವರಿಗೆ ಪಂಚಾಕ್ಷರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪಂಚಾಕ್ಷರ ಪ್ರಶಸ್ತಿ ಅಂಗವಾಗಿ ಶ್ರೀಯುತರಿಗೆ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ , ನಗದು ಹಣ ರೂಪಾಯಿ 5 ಸಾವಿರ ನೀಡಿ ಸನ್ಮಾನಿಸಲಾಗುತ್ತದೆಂದು ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಅಧ್ಯಕ್ಷ ಪ್ರೊ.ಎಸ್.ವಿ.ಕಲ್ಮಠ ಹಾಗು ಕಾರ್ಯದರ್ಶಿಗಳಾದ ದಾನಿ ಬಾಬುರಾವ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.