ಪಂಪ್ ಖರೀದಿ:ಭ್ರಷ್ಟಾಚಾರ – ಕ್ರಮಕ್ಕೆ ಆಗ್ರಹ

ಲಿಂಗಸುಗೂರು.ಏ.೨೧-ಪುರಸಭೆ ವ್ಯಾಪ್ತಿಗೆ ಕುಡಿವ ನೀರು ಸರಬರಾಜು ಮಾಡುವ ಉದ್ದೇಶಕ್ಕಾಗಿ ಮೋಟಾರು ಪಂಪ್ ಖರೀದಿಯಲ್ಲಿ ಅವ್ಯವಹಾರವಾಗಿದೆ. ಕೂಡಲೇ ಪುರಸಭೆ ಜೆಇ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ ಅತ್ನೂರು ಆಗ್ರಹಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುರಸಭೆಯ ೨೩ ವಾರ್ಡ್‌ಗಳಿಗೆ ಸಮರ್ಪಕ ಕುಡಿವ ನೀರು ಪೂರೈಸುವ ಉದ್ದೇಶದಿಂದ ೨೦೧೮-೧೯ನೇ ಸಾಲಿನಲ್ಲಿ ೧೪ನೇ ಹಣಕಾಸು ಯೋಜನೆಯಡಿ ೨೫ ಲಕ್ಷ ರೂ ವೆಚ್ಚದಲ್ಲಿ ೬೦ಹೆಚ್‌ಪಿಯ ೧ ಮೋಟಾರ್ ಪಂಪ್ ಹಾಗೂ ೪೦ ಹೆಚ್‌ಪಿಯ ೨ ಮೋಟಾರ್ ಪಂಪ್ ಖರೀದಿಸಲು ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪ್ರಕ್ರೀಯೆಯಲ್ಲಿ ಸಿಂಧನೂರು ನಗರದ ಮಲ್ಲಿಕಾರ್ಜುನ ಎನ್ನುವವರು ಒಟ್ಟು ಟೆಂಡರ್ ಹಣಕ್ಕೆ ೩ ಲಕ್ಷ ರೂಪಾಯಿಗಳನ್ನು ಕಡಿಮೆ ಮೊತ್ತ ಬರೆದು ಟೆಂಡರ್ ಪಡೆದುಕೊಂಡಿದ್ದಾರೆ. ೬೦ ಹೆಚ್‌ಪಿಯ ೧ ಹಾಗೂ ೪೦ ಹೆಚ್‌ಪಿಯ ಎರಡು ಮೋಟಾರ ಪಂಪ್‌ಗಳನ್ನು ಶುದ್ಧೀಕರಣ ಘಟಕದಲ್ಲಿ ೨೦೧೯ ಜೂನ್ ೨೧ರಂದು ಅಳವಡಿಸಲಾಯಿತು.
ಮೊಟಾರು ಪಂಪ್‌ಗಳನ್ನು ಕಿರ್ಲೋಸ್ಕರ್ ಕಂಪನಿಯ ಮೊಟಾರು ಪಂಪ್‌ಗಳೆಂದು ನಕಲಿ ಮೊಟಾರು ಪಂಪ್‌ಗಳನ್ನು ಅಳವಡಿಸಲಾಗಿದೆ. ನೀರು ಶುದ್ಧೀಕರಣದಲ್ಲಿ ಅಳವಡಿಸಿದ ದಿನದಿಂದಲೂ ಸದರಿ ಮೋಟಾರ ಪಂಪ್‌ಗಳು ಕಾರ್ಯನಿರ್ವಹಣೆ ಆಗುತ್ತಿಲ್ಲ, ಆದಾಗ್ಯೂ ಪುರಸಭೆ ಇಂಜಿನಿಯರ್ ಎಸ್.ಎಂ.ಹಸನ್ ಅವರು ೨೦೧೯ ಸೆ ೧೯ರಂದು ೧೬.೮೨ ಲಕ್ಷ ಹಾಗೂ ೨೦೧೯ರ ಅಕ್ಟೋಬರ್ ೦೩ರಂದು ನಾಲ್ಕು ಲಕ್ಷ ಸೇರಿಸಿ ಒಟ್ಟು ೨೦.೮೨ ಲಕ್ಷ ರೂಪಾಯಿ ಗುತ್ತಿಗೆದಾರರಿಗೆ ಪಾವತಿಸಲು ಆದೇಶ ಮಾಡಿರುತ್ತಾರೆ.
೨೩ವಾರ್ಡಗಳಲ್ಲಿ ಶುದ್ಧ ಕುಡಿವ ನೀರು ಪೂರೈಸಲು ಕಳೆದ ೨೦ ವರ್ಷಗಳ ಹಿಂದೆ ಅಳವಡಿಸಿದ ೪೦ ಹೆಚ್‌ಪಿ ಮೋಟಾರ್ ಪಂಪ್‌ಗಳನ್ನು ಅಳವಡಿಸಲಾಗಿತ್ತು. ಮೋಟಾರು ಪಂಪ್‌ಗಳಿಂದ ಮದರ್‌ಟ್ಯಾಂಕ್‌ಗೆ ಏಳು ತಾಸಿನಲ್ಲಿ ಭರ್ತಿಯಾಗುತ್ತಿತ್ತು. ಆದರೆ ೨೦೧೮-೧೯ನೇ ಸಾಲಿನಲ್ಲಿ ಮೋಟಾರು ಪಂಪ್‌ಗಳಿಂದ ಮದರ್‌ಟ್ಯಾಂಕ್ ತುಂಬಲು ಈಗ ೧೫ ತಾಸುಗಳಲ್ಲಿ ಟ್ಯಾಂಕ್ ತುಂಬುತ್ತಿದೆ. ಕಿರ್ಲೋಸ್ಕರ್ ಕಂಪನಿಯ ಮೋಟಾರು ಪಂಪ್‌ಗಳು ನಕಲಿಯಾಗಿವೆ.
ಕುಡಿಯುವ ನೀರಿನ ಕೆರೆಯಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದು ಬೇಸಿಗೆ ಲಭ್ಯವಿದ್ದರೂ ಕೂಡಾ ನಕಲಿ ಮೋಟಾರ್ ಪಂಪ್‌ಗಳ ನೀರಿನ ಅಭಾವ ಎದುರಾಗುತ್ತಿದೆ. ನಕಲಿ ಪಂಪ್‌ಗಳ ಖರೀದಿಗೆ ಕಾರಣರಾದ ಪುರಸಭೆ ಜೆಇ ವಿರುದ್ಧ ಕ್ರಮಕೈಗೊಳ್ಳುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರರಿಗೆ ದೂರು ನೀಡಿದ್ದೇವೆ ಎಂದರು.
ಬಿಜೆಪಿ ಯುವ ಮುಖಂಡ ಸುರೇಶ ಮೇಟಿ ಈ ವೇಳೆ ಉಪಸ್ಥಿರಿದ್ದರು.