ಪಂಪ್‌ಸೆಟ್, ಕೇಬಲ್ ವೈರ್ ಕಳ್ಳತನ

ಬಾಬುಅಲಿ ಕರಿಗುಡ್ಡ
ದೇವದುರ್ಗ.ನ.೧೬-ಅರಕೇರಾ ಹೋಬಳಿಯಲ್ಲಿ ಕಳ್ಳರ ಕಾಟ ಮಿತಿಮೀರಿದ್ದು, ಇಷ್ಟುದಿನ ಮನೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು, ಈಗ ರೈತರ ಜಮೀನಿಗೆ ನುಗ್ಗಿದ್ದಾರೆ. ಬೆಳಗಾಗುವುದರೊಳಗೆ ನೂರಾರು ರೈತರ ಪಂಪ್‌ಸೆಟ್ ಕೇಬಲ್ ವೈರ್ ಕಳ್ಳತನ ಮಾಡಿದ್ದು, ಅನ್ನದಾತರಿಗೆ ಬರಸಿಡಿಲು ಬಡಿದಂತಾಗಿದೆ.
ಅರಕೇರಾ ಹೋಬಳಿ ಗುಡ್ಡಗಾಡಿನಿಂದ ಕೂಡಿದ್ದು, ಜಮೀನು ಮೇಲ್ಭಾಗದಲ್ಲಿ ನಾರಾಯಣಪುರ ಬಲದಂಡೆ ನಾಲೆ ಕೆಳಭಾಗದಲ್ಲಿದೆ. ಇದರಿಂದ ನಾಲೆಯಿಂದ ನೀರು ಹರಿಸಿದರೆ, ಜಮೀನಿಗೆ ನೀರು ತಲುಪುವುದಿಲ್ಲ. ಈ ಭಾಗದ ಬಹುತೇಕ ರೈತರು ಪಂಪ್‌ಸೆಟ್‌ನಿಂದ ಕಾಲುವೆ, ಕೊಳವೆಬಾವಿ, ಬಾವಿ, ಕೆರೆ ನೀರು ಪಡೆಯುತ್ತಾರೆ.
ಎರಡ್ಮೂರು ದಿನಗಳಿಂದ ಕಳ್ಳರ ಹಾವಳಿ ಹೆಚ್ಚಾಗಿದ್ದು, ಅರಕೇರಾ, ನಾಗೋಲಿ, ಬುದ್ದಿನ್ನಿ, ಜುಟ್ಟಮರಡಿ ಸೇರಿ ಆ ಭಾಗದಲ್ಲಿ ನೂರಾರು ರೈತರ ಜಮೀನನಲ್ಲಿ ಅಳವಡಿಸಿದ್ದ ಕೇಬಲ್ ವೈರ್ ಕತ್ತರಿಸಿ ಕಳ್ಳತನ ಮಾಡಿದ್ದಾರೆ. ಕೆಲಕಡೆ ಪಂಪ್‌ಸೆಟ್‌ಕೂಡ ಕಳ್ಳತನ ಮಾಡಿದ್ದಾರೆ. ಕೊಳವೆಬಾವಿ, ಬೋರ್‌ವೆಲ್ ಕೇಬಲ್ ವೈರ್ ಟಾರ್ಗೇಟ್ ಮಾಡಿದ ಕಳ್ಳತರು, ರಾತ್ರೋರಾತ್ರಿ, ಟಂಟಂ, ಬೈಕ್ ಗಳಲ್ಲಿ ಜಮೀನುಗಳಿಗೆ ಲಗ್ಗೆ ಹಾಕಿ ವೈರ್ ಕದ್ದಿದ್ದಾರೆ. ಪಂಪ್‌ಸೆಟ್ ಭಾರವಾಗಿರುವ ಕಾರಣ ಅದಕ್ಕೆ ಕೈಹಾಕದೆ, ಸಣ್ಣಪುಟ್ಟ ವಸ್ತುಗಳನ್ನು ಎಗರಿಸಿದ್ದಾರೆ. ಕೇಬಲ್‌ವೈರ್ ಒಳಗಿನ ತಂತಿ ಬೆಲೆಬಾಳುವ ಕಾರಣ ಕಳ್ಳತರಿಗೆ ಕೇಬಲ್ ಟಾರ್ಗೇಟಾಗಿದೆ.
ನಾಗೋಲಿಯಲ್ಲಿ ೪೦, ಬುದ್ದಿನ್ನಿಯಲ್ಲಿ ೧೫ಕ್ಕೂ ಹೆಚ್ಚು, ಜುಟ್ಟಮರಡಿಯಲ್ಲಿ ೨೦, ತಾಂಡಾ, ದೊಡ್ಡಿ ಸೇರಿ ಸುಮಾರು ೮೦ಕ್ಕೂ ಹೆಚ್ಚುಕಡೆ ಕಳ್ಳತನವಾಗಿದೆ. ಫೀಟ್‌ವೈರ್‌ಗೆ ೩೦-೫೦ರೂ. ಬೆಲೆಯಿದ್ದು, ಪ್ರತಿಪಂಪ್‌ಸೆಟ್‌ಗೆ ೫ರಿಂದ೭ಸಾವಿರ ರೂ. ಮೌಲ್ಯದ ವೈರ್ ಅಳವಡಿಸಲಾಗಿದೆ. ಸುಮಾರು ೮೦ರೈತರ ಅಂದಾಜು ೭ಲಕ್ಷ ರೂ. ಮೌಲ್ಯದ ವೈರ್ ಕಳ್ಳತನವಾಗಿದೆ.
ಕೃಷಿಕರಿಗೆ ನುಂಗಲಾರದ ತುತ್ತು:
ಎನ್‌ಆರ್‌ಬಿಸಿ ಕೆಳಭಾಗದಲ್ಲಿರುವ ಕಾರಣ ರೈತರು ಕಾಲುವೆ ಪಂಪ್‌ಸೆಟ್ ಅಳವಡಿಸಿ ನೀರು ಪಡೆಯಲೇಬೇಕು. ಅವೈಜ್ಞಾನಿಕ ಕಾಲುವೆ ನಿರ್ಮಾಣದಿಂದ ನೀರಿಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಅಧಿಕಾರಿಗಳ ಅನುಮತಿ ಪಡೆದು ಕಾಲುವೆ ಮೇಲೆ ಪಂಪ್‌ಸೆಟ್ ಅಳವಡಿಸಿದ್ದಾರೆ. ಇಲ್ಲಿ ಕಾನೂನಿಗಿಂತ ಮಾನವೀತೆ ಹಾಗೂ ಅನ್ನದಾತರ ಹೊಟ್ಟೆಪಾಡು ನೋಡಿ ಪಂಪ್‌ಸೆಟ್ ಅಳವಡಿಸಲು ಮೌಖಿಕ ಅವಕಾಶವಿದೆ. ರಾತ್ರೋರಾತ್ರಿ ಕೇಬಲ್‌ಗೆ ಕನ್ನಹಾಕಿದ್ದರಿಂದ ರೈತರು ಸಮಸ್ಯೆ ಯಾರಿಗೆ ಹೇಳಬೇಕೆನ್ನುವ ಸಂಕಷ್ಟೀಡಾಗಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ, ನಿಯಮಮೀರಿ ಪಂಪ್‌ಸೆಟ್ ಯಾಕೆ ಹಾಕಿದ್ದೀರಾ ಎನ್ನುವ ಆರೋಪ ಬರಲಿದೆ. ಈಗಾಗಿ ರೈತರು ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ.
ಕೋಟ್====
ಬಲದಂಡೆ ನಾಲೆ ಮೇಲೆ ಪಂಪ್‌ಸೆಟ್ ಅಳವಡಿಸಲು ಅವಕಾಶವಿಲ್ಲ. ಆದರೆ, ಕಾಲುವೆ ಕೆಳಭಾಗ, ರೈತರ ಜಮೀನು ಮೇಲ್ಭಾಗದಲ್ಲಿರುವ ಕಾರಣ ಮಾನವೀಯ ದೃಷ್ಟಿಯಿಂದ ವಿರೋಧ ಮಾಡಿಲ್ಲ. ವೃತ್ತಿಪರ ಕಳ್ಳರು ಕೇಬಲ್‌ನಲ್ಲಿರುವ ಬೆಲೆಬಾಳುವ ಕಾಪರ್ ತಂತಿಗಾಗಿ ಕಳ್ಳತನ ಮಾಡಿರಬಹುದು.
ಮಹಿಬೂಬ್‌ಸಾಬ್