ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಕಿಡಿಗೇಡಿಗಳಿಂದ ಗೋಡೆಬರಹ


ಮಂಗಳೂರು, ಎ.೨೨- ನಗರದ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯ ಮುಂಭಾಗದಲ್ಲಿ ಪಂಪ್‌ವೆಲ್ ಮೇಲ್ಸೇತುವೆಯ ಮೇಲೆ ಮಂಗಳವಾರ ಗೋಡೆ ಬರಹವೊಂದು ಕಾಣಿಸಿದೆ.
‘ಲಾಕ್‌ಡೌನ್ ನೀಡೆಡ್’ ಎಂದು ಇಂಗ್ಲಿಷ್‌ನಲ್ಲಿ ಬರೆದ ಗೋಡೆಬರಹದ ಬಳಿಯೇ ‘ಬ್ಯಾಡ್ ಬಾಯ್ಸ್ ಇನ್ ದ ಸಿಟಿ’ ಎಂದು ಬರೆಯಲಾಗಿದೆ. ಅದರ ಮೇಲಿನ ಭಾಗದಲ್ಲಿ ?ಟೆಲ್ ಯುವರ್ ಮಾಮ್ ಬಾ….’ ಎಂದು ಬರೆಯಲಾಗಿದೆ. ಕೊರೋನ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್‌ಡೌನ್ ಆಗಬೇಕು ಎಂದು ಕಿಡಿಗೇಡಿಗಳು ಇದನ್ನು ಬರೆದಿರುವ ಸಾಧ್ಯತೆಯಿದೆ. ಅದರ ಪಕ್ಕದಲ್ಲೇ ಮತ್ತೆರಡು ವಾಕ್ಯಗಳನ್ನು ಬೇರೆ ಯಾರೋ ಬರೆದಿದ್ದಾರೆ. ಯಾಕೆಂದರೆ ಎರಡೂ ಬರಹಕ್ಕೆ ಬಳಸಿದ ಬಣ್ಣ ಬೇರೆ ಬೇರೆಯಾಗಿದೆ. ಲಾಕ್‌ಡೌನ್ ನೀಡೆಡ್ ಎಂದು ಬರೆದಿರುವುದಕ್ಕೆ ಬಾಣದ ಗುರುತು ಹಾಕಿ ‘ಬ್ಯಾಡ್ ಬಾಯ್ಸ್ ಇನ್ ದಿ ಸಿಟಿ’ ಎಂದು ಬರೆಯಲಾಗಿದೆ. ಕೆಲವು ತಿಂಗಳ ಹಿಂದೆ ಉಗ್ರ ಸಂಘಟನೆಗಳ ಪರವಾಗಿ ನಗರದಲ್ಲಿ ಕಾಣಿಸಿಕೊಂಡ ಗೋಡೆಬರಹವೊಂದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೊಂದು ಬರಹ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.