ಪಂತ್ ಶತಕದ ನಡುವೆಯೂ ಹರಿಣಗಳಿಗೆ ಅಲ್ಪ ಮೊತ್ತದ ಸವಾಲು: ಕುತೂಹಲದತ್ತ 3ನೇ ಟೆಸ್ಟ್

ಕೇಪ್​ಟೌನ್​, ಜ.13-ಸಾಧಾರಣ ಮೊತ್ತದ ಸವಾಲಿನ ಬೆನ್ನಹತ್ತಿರುವ ಭಾರತದ ವಿರುದ್ದದ ಸರಣಿ ನಿರ್ಣಾಯಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸರಣಿ ಕೈವಶದತ್ತ ದಾಪುಗಾಲು ಹಾಕಿದೆ.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆತಿಥೇಯ ತಂಡ ಆರಂಭದಲ್ಲೇ 16 ರನ್ ಗಳಿಸಿ ಮರ್ಕರಂ ಶಮಿ ಬೌಲಿಂಗ್ ನಲ್ಲಿ ನಿರ್ಗಮಿಸಿದರು.
ನಂತರ ಡೀನ್ ಎಲ್ಗಾರ್ ಹಾಗೂ ಕೀಗನ್ ಪೀಟರ್ ಸನ್ ತಾಳ್ಮೆ ಆಟ ಪ್ರದರ್ಶಿಸಿದರು. ಡೀನ್ ಎಲ್ಗಾರ್ 30 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.
ದಿನದಾಟದ ಅಂತ್ಯಕ್ಕೆ ಪೀಟರ್ ಸನ್ 48 ರನ್ ಗಳಿಸಿ ಆಡುತ್ತಿದ್ದಾರೆ. ಹರಿಣಗಳ ಗೆಲುವಿಗೆ 111 ರನ್ ಗಳ ಅಗತ್ಯವಿದೆ. ಕೊಹ್ಲಿ ಪಡೆ ಗೆಲ್ಲಬೇಕಾದರೆ ಎಂಟು ವಿಕೆಟ್ ಗಳಿಸಬೇಕಿದೆ. ಒಟ್ಟಿನಲ್ಲಿ ಕುತೂಹಲವಂತೂ ಇದ್ದೇ ಇದೆ.
ಇದಕ್ಕೂ ಮುನ್ನ ವಿಕೆಟ್ ಕೀಪರ್​, ಬ್ಯಾಟರ್​ ರಿಷಭ್ ಪಂತ್ ಅಜೇಯ ಶತಕದ ಹೊರತಾಗಿಯೂ ಭಾರತ ತಂಡ 3ನೇ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 212 ರನ್​ಗಳ ಸಾಧಾರಣ ಗುರಿ ನೀಡಿತು.
3ನೇ ದಿನ 2ನೇ ಇನ್ನಿಂಗ್ಸ್​ನಲ್ಲಿ ಭಾರತ ತಂಡ ಹರಿಣಗಳ ವೇಗದ ದಾಳಿಗೆ ತತ್ತರಿಸಿ ಕೇವಲ 198 ರನ್​ಗಳಿಗೆ ಆಲೌಟ್​ ಆಯಿತು. ರಿಷಭ್ ಪಂತ್ ಏಕಾಂಗಿ ಹೋರಾಟ ನಡೆಸಿ 139 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್​ಗಳ ನೆರವಿನಿಂದ 100 ರನ್​ಗಳಿಸಿ ಅಜೇಯರಾಗಿ ಉಳಿದರು.‌
ಪಂತ್ ಹೊರತುತುಪಡಿಸಿದರೆ ನಾಯಕ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ 29 ರನ್​ಗಳಿಸಿದ್ದೇ ತಂಡದ 2ನೇ ಗರಿಷ್ಠ ಸ್ಕೋರ್​ ಆಗಿತ್ತು. ಉಳಿದ ಯಾವೊಬ್ಬ ಬ್ಯಾಟರ್​ 10ರ ಗಡಿದಾಟುವಲ್ಲಿ ವಿಫಲರಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಕೆಎಲ್ ರಾಹುಲ್​ 10, ಮಯಾಂಕ್ ಅಗರ್ವಾಲ್ 7, ಪೂಜಾರ 9, ರಹಾನೆ 1, ರವಿಚಂದ್ರನ್ ಅಶ್ವಿನ್​ 7, ಶಾರ್ದೂಲ್ ಠಾಕೂರ್​ 5, ಬುಮ್ರಾ 2, ಉಮೇಶ್ ಯಾದವ್​ ಮತ್ತು ಶಮಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ದಕ್ಷಿಣ ಅಫ್ರಿಕಾ ಪರ ಮಾರ್ಕೊ ಜಾನ್ಸನ್​ 36ಕ್ಕೆ 4, ಕಗಿಸೊ ರಬಾಡ 53ಕ್ಕೆ3, ಲುಂಗಿ ಎಂಗಿಡಿ 21ಕ್ಕೆ 3 ವಿಕೆಟ್ ಪಡೆದು ಭಾರತ ತಂಡವನ್ನು 200ರ ಗಡಿಯೊಳಗೆ ನಿಯಂತ್ರಿಸಿದರು.