ಪಂತ್ ಭರ್ಜರಿ ಶತಕ, ಪಾಂಡ್ಯ ಆಟ ಬೊಂಬಾಟ್ :ಆಂಗ್ಲರ ವಿರುದ್ಧ ಭಾರತಕ್ಕೆ ಒಡಿಐ ಸರಣಿ

ಮ್ಯಾಂಚೆಸ್ಟರ್‌, ಜು.17- ವಿಕೆಟ್ ಕೀಪರ್ ರಿಷಬ್ ಪಂತ್ ಭರ್ಜರಿ ಶತಕ ಹಾಗೂ ಹಾರ್ದಿಕ್ ಪಾಂಡ್ಯ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ವಿರುದ್ದದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.
ಈ ಜಯದೊಂದಿಗೆ 2-0ಯಿಂದ ಟೀಂ ಇಂಡಿಯಾ ಸರಣಿ ಕೈ ವಶ ಮಾಡಿಕೊಂಡಿತು.
260 ರನ್ ಗಳ ಗುರಿಯನ್ನು ಬೆನ್ನಹತ್ತಿದ ಭಾರತ ಐದು ವಿಕೆಟ್ ಕಳೆದುಕೊಂಡು 42.1 ಓವರ್ ಗಳಲ್ಲಿ ಗೆಲುವಿನ ನಗೆ ಬೀರಿತು.
72 ರನ್ ಗಳಿಸುವಷ್ಟರಲ್ಲಿ ಭಾರತ ನಾಲ್ಕು ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ 17, ಶಿಖರ್ ಧವನ್ 1, ವಿರಾಟ್ ಕೊಹ್ಲಿ 17 ಹಾಗೂ ಸೂರ್ಯಕುಮಾರ್ 16 ರನ್ ಗಳಿಸಿ ನಿರ್ಗಮಿಸಿದರು.
ನಂತರ ಹಾರ್ದಿಕ್ ಪಾಂಡ್ಯ ಹಾಗೂ ರಿಷಬ್ ಪಂತ್ ಜತೆಗೂಡಿ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದರು. ಇವರಿಬ್ಬರು ಶತಕದ ಜತೆಯಾಟವಾಡಿ ತಂಡದ ಮೊತ್ತವನ್ನು 205 ರವರೆಗೆ ಕೊಂಡೊಯ್ದರು.
ಈ ಹಂತದಲ್ಲಿ 55 ಎಸೆತಗಳಲ್ಲಿ 10 ಬೌಂಡರಿ ಬಾರಿಸಿ 71 ರನ್ ಗಳಿಸಿ ಪಾಂಡ್ಯ ಔಟಾದರು. ಇತ್ತ ಪಂತ್ ಶತಕ ಸಿಡಿಸುವುದರ ಜತೆಗೆ ಡೇವಿಡ್ ವಿಲ್ಲಿ ಬೌಲಿಂಗ್ ನಲ್ಲಿ ಸತತ ಐದು ಬಾರಿ ಚೆಂಡನ್ನು ಬೌಂಡರಿಗಟ್ಟಿದರು.
ಪಂತ್ 113 ಎಸೆತಗಳಲ್ಲಿ 16 ಬೌಂಡರಿ ಹಾಗೂ ಎರಡು ಸಿಕ್ಸರ್ ಬಾರಿಸಿ ಅಜೇಯ 125 ರನ್ ಬಾರಿಸಿದರು. ಜಡೇಜಾ 7 ರನ್ ಗಳಿಸಿ ಔಟಾಗದೆ ಉಳಿದರು.
ಎರಡನೇ ಪಂದ್ಯದಲ್ಲಿ ಭಾರತ 100 ರನ್ ಗಳಿಂದ ಸೋತಿತ್ತು. ಇದರೊಂದಿಗೆ ಟಿ-20 ಹಾಗೂ ಏಕದಿನ ಸರಣಿಯನ್ನು ಭಾರತ ಕೈವಶ ಮಾಡಿಕೊಳ್ಳುವಲ್ಲಿ ಸಫಲವಾದರೆ, ಟೆಸ್ಟ್ ಸರಣಿ ಸಮಬಲದಲ್ಲಿ ಅಂತ್ಯಗೊಂಡಿತ್ತು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 45.5 ಓವರ್ ಗಳಲ್ಲಿ 259 ರನ್ ಗಳಿಗೆ ಸರ್ಪಪತನ ಕಂಡಿತು.
ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಾಹಲ್ ಹಾಗೂ ಮೊಹ್ಮದ್ ಸಿರಾಜ್ ಉತ್ತಮ ಬೌಲಿಂಗ್ ನಿಂದ ಇಂಗ್ಲೆಂಡ್ ಬೃಹತ್ ಮೊತ್ತಕ್ಕೆ ಕಡಿವಾಣ ಹಾಕಿದರು.
ಮೊಹ್ಮದ್ ಸಿರಾಜ್ ಮೊದಲ ಓವರ್ ನಲ್ಕೇ ಜಾನಿ ಬೆಸ್ಟೊ, ಜೋ ರೂಟ್ ಅವರು ಶೂನ್ಯಕ್ಕೆ ಔಟ್ ಮಾಡಿದರು. ಈ ಹಂತದಲ್ಲಿ ಜೇಸನ್ ರಾಯ್ 41 ಹಾಗೂ ಬೆನ್ ಸ್ಟೋಕ್ಸ್ 27 ರನ್ ಗಳಿಸಿ ಅರ್ಧಶತಕ ಜತೆಯಾಟವಾಡಿದರು.
ಈ ವೇಳೆ ಬೌಲಿಂಗ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ ರಾಯ್ ವಿಕೆಟ್ ಗಳಿಸಿದರು. ಇದರ ಬೆನ್ನಲ್ಲೇ ಬೆನ್ ಸ್ಟೋಕ್ ಪೆವಿಲಿಯನ್ ಗೆ ಮರಳಿದರು. ಬಟ್ಲರ್ ಹಾಗೂ ಮೊಯಿನ್ ಅಲಿ 5 ನೇ ವಿಕೆಟ್ ಗೆ 75 ರನ್ ಸೇರಿಸಿದರು. ಅಲಿ 34 ರನ್ ಗಳಿಸಿ ಔಟಾದರು. ಬಟ್ಲರ್ ಆಕರ್ಷಕ 60 ರನ್ ಗಳಿಸಿದರು. ಪಾಂಡ್ಯ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಿತ್ತರು.
8ನೇ ವಿಕೆಟ್ ಗೆ ಡೇವಿಡ್ ವಿಲ್ಲಿ 18 ಹಾಗೂ ಕ್ರೇಗ್ ಓವರ್ ಟನ್ 32 ರನ್ ಗಳಿಸಿ 48 ರನ್ ಗಳಿಸಿ ತಂಡದ ಮೊತ್ತ 250ರ ಗಡಿ ದಾಟಿಸಿದರು. ಭಾರತದ ಪರ ಹಾರ್ದಿಕ್ ಪಾಂಡ್ಯ 4 ಚಹಲ್ ,ಸಿರಾಜ್ 2 ಹಾಗೂ ಜಡೇಜಾ ಒಂದು ವಿಕೆಟ್ ಗಳಿಸಿದರು.