ಪಂಢರಪುರ ಯಾತ್ರೆಗೆ ಹೋಗೋಣ ಬನ್ನಿ

ಕಲಬುರಗಿ,ಜೂ 26: ಇದೇ ಜೂನ್ 29 ರಂದು ಆಷಾಢ ಶುದ್ಧ ಏಕಾದಶಿ. ಭಗವಂತ ಯೋಗನಿದ್ರೆ ಆರಂಭಿಸುವ ಈ ಪವಿತ್ರ ದಿನದಂದು ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಪಂಢರಪುರಕ್ಕೆ ಆಗಮಿಸಿ ವಿಠ್ಠಲನ ದರ್ಶನ ಪಡೆಯುತ್ತಾರೆ. ಕೀರ್ತನೆ, ಭಜನೆಗಳಲ್ಲಿ ತಣಿಯುತ್ತಾರೆ. ನಾವೆಲ್ಲ ಒಂದು ಎಂದು ಬೆರೆಯುತ್ತಾರೆ. ಆಷಾಢ ಶುದ್ಧ ಏಕಾದಶಿ ವಿಠ್ಠಲ ದರ್ಶನ ಪಡೆದು ನಡಿಗೆಯ ನೋವನ್ನೇ ಮರೆಯುತ್ತಾರೆ. ಇದು ನಡಿಗೆ ಹಾಗೂ ನಾದೋಪಾಸನೆಗೆ ಇರುವ ಅದ್ಭುತ ಶಕ್ತಿ.ನಾಮಸಂಕೀರ್ತನೆ ಸುಖದಲ್ಲಿ ನಡೆಯುವ ಇವರು ಜಾತಿ, ಜನಾಂಗದ ನಡುವಿನ ಭೇದ ಮರೆಯುತ್ತಾರೆ. ಬದುಕಿನುದ್ದಕ್ಕೂ ತ್ಯಾಗ, ಕ್ಷಮೆ, ಅನುಕಂಪ, ಶಾಂತಿ, ಅಹಿಂಸೆ, ಪ್ರೀತಿ, ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಸರಳ ಜೀವನ ನಡೆಸುತ್ತಾರೆ.ದುಶ್ಚಟಗಳಿಂದ ದೂರವಿದ್ದು, ಶಾಖಾಹಾರಿಗಳಾಗಿ ತುಳಸಿ ಮಾಲೆ ಧರಿಸುತ್ತಾರೆ. ಹರಿಪಥ ಓದಿ, ಭಜನೆ ಕೀರ್ತನೆಗಳಲ್ಲಿ ಹೆಚ್ಚು ಕಾಲ ಕಳೆಯುತ್ತಾರೆ. ಇದು ಪಾದಯಾತ್ರೆ, ಉಪವಾಸದಿಂದ ಕಲಿಯಬಹುದಾದ ಪಾಠ
ವಾರಕರಿ ಸಂಪ್ರದಾಯ:
ಪಂಢರಪುರದಲ್ಲಿ ಆಷಾಢ, ಶ್ರಾವಣ, ಕಾರ್ತಿಕ ಹಾಗೂ ಮಾಘ ಮಾಸಗಳಲ್ಲಿ ಬೃಹತ್ ಉತ್ಸವ ನಡೆಯುತ್ತವೆ. ಈ ಸಂದರ್ಭದಲ್ಲಿ ಭಕ್ತರು ಕಾಲ್ನಡಿಗೆಯಿಂದ ಇಲ್ಲಿಗೆ ಆಗಮಿಸುತ್ತಾರೆ. ವಿಶೇಷವಾಗಿ ಆಷಾಢ ಶುದ್ಧ ಏಕಾದಶಿಗೆ ಹೆಚ್ಚು ಭಕ್ತರು ಆಗಮಿಸುತ್ತಾರೆ.ಇದನ್ನು ವಾರಕರಿ ಸಂಪ್ರದಾಯ ಎನ್ನುತ್ತಾರೆ. ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ ಈ ಸಂಪ್ರದಾಯದಲ್ಲಿ ಬರುವ ಪ್ರಮುಖರು. ಪಂಢರಪುರಕ್ಕೆ ಪಲ್ಲಕ್ಕಿ ಹೊತ್ತು ಪಾದಯಾತ್ರೆ ಮೂಲಕ ಬರುವುದು ಸಂಪ್ರದಾಯ. ಅಳಂದದಿಂದ ಜ್ಞಾನೇಶ್ವರ ಮಹಾರಾಜ ಭಕ್ತರು, ದೇಹುದಿಂದ ತುಕಾರಾಮರ ಭಕ್ತರು, ಪೈಠಣದಿಂದ ಏಕನಾಥರ ಭಕ್ತರು, ತ್ರಯಂಬಕೇಶ್ವರದಿಂದ ನಿವೃತ್ತಿನಾಥರ ಭಕ್ತರು, ಮುಕ್ತಿನಗರದಿಂದ ಮುಕ್ತಾಬಾಯಿ ಭಕ್ತರು, ಶೇಗಾಂವದಿಂದ ಗಜಾನನ ಮಹಾರಾಜರ ಭಕ್ತರು, ಸಾಸವಾಡದಿಂದ ಸೋಪಾನ ಮಹಾರಾಜರ ಭಕ್ತರು ಪಲ್ಲಕ್ಕಿ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಪ್ರಸ್ತುತ ನಾನಾ ಸ್ಥಳಗಳಿಂದ ಅಂದಾಜು 40 ಪಲ್ಲಕ್ಕಿಗಳು ಉತ್ಸವ ಸಂದರ್ಭದಲ್ಲಿ ಪಂಢರಪುರಕ್ಕೆ ಆಗಮಿಸುತ್ತವೆ.
ಪ್ರತಿ ತಿಂಗಳ ಶುಕ್ಲ ಹಾಗೂ ಕೃಷ್ಣ ಪಕ್ಷಗಳ ಹನ್ನೊಂದನೇ (ಏಕಾದಶಿ) ದಿನ ವಿಶೇಷ ಮಹತ್ವ ಪಡೆದಿದೆ. ಈ ದಿನ ಆಹಾರವನ್ನು ತ್ಯಜಿಸಿ ದೇವರ ಧ್ಯಾನದಲ್ಲಿ ತೊಡಗಿದರೆ ವಿಶೇಷ ಫಲ ದೊರೆಯುತ್ತದೆ ಎಂಬುದು ನಿಯಮ.
_ಜಿ.ಕೆ ಪಟ್ಟಣಶೆಟ್ಟಿ