ಪಂಡಿತ ತಾರಾನಾಥರ ಬಹುಮುಖ ಕೊಡುಗೆ ಅಮೋಘ

ಕಲಬುರಗಿ:ಜೂ.11: ತಮ್ಮ ಅಸಾಧಾರಣವಾದ ಬುದ್ಧಿ ಮತ್ತು ಇಚ್ಛಾಶಕ್ತಿಯ ಮೂಲಕ, ತಮ್ಮದೆಲ್ಲವನ್ನೂ ದುಃಖ ಪೀಡಿತ ನೆರವಿಗೆ ಬಳಸಿ, ವೈದ್ಯರಾಗಿ, ಸಮಾಜ ಸುಧಾರಕರಾಗಿ, ಶಿಕ್ಷಕರಾಗಿ ಮಾದರಿಯ ಜೀವನವನ್ನು ಸಾಗಿಸಿದ ಪಂಡಿತ ತಾರಾನಾಥರ ಬಹುಮುಖ ಕೊಡುಗೆ ಅಮೋಘವಾಗಿದೆಯೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಎಂ.ಎಂ.ಎನ್ ಟ್ಯೂಟೋರಿಯಲ್ಸ್‍ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸರಳವಾಗಿ ಜರುಗಿದ ‘ಪಂಡಿತ ತಾರಾನಾಥರ ಜನ್ಮದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.

  ವೈದ್ಯರಾಗಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಾ ರೋಗಿಗಳಲ್ಲಿ ದೇವರನ್ನು ಕಂಡ ಇವರು, ಧನ್ವಂತರಿ ಚಿಕಿತ್ಸೆಯನ್ನು ಹೆಚ್ಚಾಗಿ ಬಳಕೆಗೆ ತಂದರು. ಆಯುರ್ವೇದ, ಯೋಗ, ಸಂಗೀತ, ಪ್ರಕೃತಿ ಚಿಕಿತ್ಸೆ, ರಸ ಚಿಕಿತ್ಸೆ ಮುಂತಾದ ಅಂಶಗಳನ್ನು ಹಿತ-ಮಿತವಾಗಿ ಬೆರೆಸಿ ಚಿಕಿತ್ಸೆಯನ್ನು ನೀಡುತ್ತಿದ್ದರು. ಉದಯೋನ್ಮುಖ ಬರಹಗಾರ, ಕಲಾವಿದ, ಸಂಘಟನಾ ಚತುರರಾಗಿ ಸೇವೆಯನ್ನು ಸಲ್ಲಿಸುವದರ ಜೊತೆಗೆ, ಅನೇಕ ಕೃತಿಗಳನ್ನು ರಚಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಬಹು ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಹೇಳಿದರು.

   ಬಳಗದ ಉಪಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡುತ್ತಾ, ಕರ್ನಾಟಕ ಕಂಡ ಮಹಾ ಮೇಧಾವಿಗಳಲ್ಲಿ ಒಬ್ಬರಾದ ಪಂಡಿತ ತಾರಾನಾಥ ಅವರು ವೈದ್ಯಕೀಯ, ಸಾಹಿತ್ಯ, ಸಮಾಜ ಸೇವೆಯ ಮೂಲಕ ಸಲ್ಲಿಸಿದ ಸೇವೆ, ನೀಡಿದ ಕೊಡುಗೆ ನಮ್ಮ ರಾಜ್ಯ ಎಂದಿಗೂ ಮರೆಯುವಂತಿಲ್ಲ. ಇಂತಹ ಅಪರೂಪದ ಸಾಧಕರನ್ನು ಪರಿಚಯಿಸುವ ಕಾರ್ಯ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜರುಗಬೇಕಾಗಿದೆಯೆಂದರು.

ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ರಾಜಕುಮಾರ ಬಟಗೇರಿ, ಶರಣಬಸಪ್ಪ ಮಲಶೆಟ್ಟಿ, ಗಣೇಶ ಗೌಳಿ, ಓಂಕಾರ ಗೌಳಿ ಇದ್ದರು.