ಪಂಜ ಅರಣ್ಯಾಧಿಕಾರಿಗಳ ಕಾರ್ಯಾಚರಣೆ-ಅಕ್ರಮ ಮರ ಸಾಗಾಟ, ವಾಹನ ವಶ

ಸುಳ್ಯ, ನ.೩- ಮುರುಳ್ಯ ಗ್ರಾಮದ ಸುಬ್ರಹ್ಮಣ್ಯ -ಮಂಜೇಶ್ವರ ರಾಜ್ಯ ಹೆದ್ದಾರಿಯ ಸಮಹಾದಿ ಎಂಬಲ್ಲಿ ಅಕ್ರಮವಾಗಿ ಕಿರಾಲ್‌ಬೋಗಿ ಮತ್ತು ಹಲಸು ಜಾತಿಯ ಮರದ ದಿಮ್ಮಿಗಳನ್ನು ಈಚರ್ ಟಿಪ್ಪರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪಂಜ ವಲಯದ ಎಡಮಂಗಲ ಶಾಖೆಯ ಸಿಬ್ಬಂದಿಗಳು ಹಾಗೂ ರಾತ್ರಿ ಗಸ್ತು ಕರ್ತವ್ಯ ಸಿಬ್ಬಂದಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಪ್ರಕರಣದಲ್ಲಿ ಲಾರಿಯನ್ನು ವಶಪಡಿಸಿಕೊಂಡಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಲಾರಿಯಲ್ಲಿ ಕಿರಾಲ್‌ಬೋಗಿ ಹಾಗೂ ಹಲಸು ಜಾತಿಯ ೮ ದಿಮ್ಮಿಗಳು, ಮೋಪನ್ನು ಹಾಗೂ ೮ ಕಂಬಗಳನ್ನು ವಶಪಡಿಸಿಕೊಳ್ಳಲಾಗಿದೆ. ವಾಹನ ಹಾಗೂ ಸೊತ್ತುಗಳ ಮೌಲ್ಯ ಅಂದಾಜು ೩ ಲಕ್ಷ ರೂ.ಗಳಾಗಿದೆ.
ಮಂಗಳೂರು ವಿಭಾಗದ ಉಪರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಲನ್‌ರವರ ಮಾರ್ಗದರ್ಶನ, ಸುಬ್ರಹ್ಮಣ್ಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಸ್ಟೀನ್ ಪಿ. ಸೋನ್ಸ್‌ರವರ ನಿರ್ದೇಶನದಲ್ಲಿ ಪಂಜ ವಲಯ ಅರಣ್ಯಾಧಿಕಾರಿಯಾದ ಮಂಜುನಾಥ್ ಎನ್.ರವರು ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಎಡಮಂಗಲ ಶಾಖಾ ಉಪವಲಯ ಅರಣ್ಯಾಧಿಕಾರಿ ಯಶೋಧರ್ ಕೆ., ಅರಣ್ಯ ರಕ್ಷಕರಾದ ಸಂತೋಷ್ ಎಸ್, ಧಮ್ಮಸೂರ, ಭರಮಪ್ಪ ಹೆಪೆರಾಜೆ ಎಚ್. ಬೆಳಗಲಲ್, ರವಿಕುಮಾರ್, ವಾಹನ ಚಾಲಕ ಪದ್ಮಕುಮಾರ ಹಾಗೂ ಸಿಬ್ಬಂದಿಗಳು ಇದ್ದರು.