ವಿಜಯಪುರ,ಜೂ5 : ಪಂಜಾಬ್, ತೆಲಂಗಾಣ ರಾಜ್ಯದಲ್ಲಿ ಕೈಗಾರಿಕೆಗಳ ಪ್ರಗತಿಗೆ ಕೈಗೊಂಡಿರುವ ಕಾರ್ಯಕ್ರಮಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಕರ್ನಾಟಕವನ್ನು ಕೈಗಾರಿಕಾ ವಲಯವನ್ನು ಮಾದರಿಯಾಗಿ ಪ್ರಗತಿಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್ ರಾಜ್ಯದಲ್ಲಿ ಇಂಧನ, ಪರಿಸರ ಸೇರಿದಂತೆ ವಿವಿಧ ಇಲಾಖೆಯ ಕೆಲವೊಂದು ಕಚೇರಿಗಳನ್ನು ಒಂದೇ ಸ್ಥಳದಲ್ಲಿ ಇದ್ದು ಆ ಒಂದೇ ಸ್ಥಳದಲ್ಲಿಯೇ ಎಲ್ಲ ಇಲಾಖೆಗಳ ನಿರಪೇಕ್ಷಣ ಪತ್ರ ಸೇರಿದಂತೆ ವಿವಿಧ ದಾಖಲಾತಿ ಪಡೆದುಕೊಳ್ಳುವ ಅವಕಾಶವಿದೆ, ಹೀಗಾಗಿ ಕೈಗಾರಿಕೆಗಳಿಗೆ ಇದು ಅನುಕೂಲ, ಈ ನಿಟ್ಟಿನಲ್ಲಿಯೂ ಅಧ್ಯಯನ ನಡೆಸಲಾಗುವುದು, ಅದೇ ತೆರನಾಗಿ ತೆಲಂಗಾಣಲ್ಲಿ ಏಕಗವಾಕ್ಷಿಯಡಿಯಲ್ಲಿ ಕೈಗಾರಿಕೆಗಳಿಗೆ ಪೂರಕವಾದ ವಾತಾವರಣ ನಿರ್ಮಾಣಗೊಂಡಿದೆ, ಈ ಬಗ್ಗೆಯೂ ಅಧ್ಯಯನ ನಡೆಸಿ ಸಮಗ್ರವಾದ ಮಾದರಿ ಕಾರ್ಯವನ್ನು ಕರ್ನಾಟಕದಲ್ಲಿ ರೂಪಿಸಲಾಗುವುದು, ಶೀಘ್ರದಲ್ಲಿಯೇ ಸಭೆ ನಡೆಸಿ ಯಾವ ರೀತಿ ಮುನ್ನಡೆಯಬೇಕು ಎಂಬುದರ ಕುರಿತು ಚರ್ಚೆ ನಡೆಸಿ ಹೆಜ್ಜೆ ಇರಿಸಲಾಗುವುದು ಎಂದು ಪಾಟೀಲ ವಿವರಿಸಿದರು.
ಕೈಗಾರಿಕೆಗಳಿಗೆ ಅನುಮತಿ ಒದಗಿಸುವ ಸಿಂಗಲ್ ವಿಂಡೋ ಪ್ರಕ್ರಿಯೆ ನೈಜವಾಗಿಯೂ ಸಿಂಗಲ್ ವಿಂಡೋ ಆಗಿರದೇ ಮಲ್ಟಿ ವಿಂಡೋ ರೀತಿಯಲ್ಲಿಯೇ ಇದೆ, ಹೀಗಾಗಿ ಈ ಬಹು ಕಿಡಕಿಗಳನ್ನು ಮುಚ್ಚಿ ಅದರ ಹೆಸರಿಗೆ ತಕ್ಕ ಹಾಗೆಯೇ ಸಿಂಗಲ್ ವಿಂಡೋ ಪ್ರಕ್ರಿಯೆಯನ್ನು ಬಲಪಡಿಸಲಾಗುವುದು ಎಂದು ವಿವರಿಸಿದರು.
ಕೈಗಾರಿಕಾ ಉದ್ದೇಶಗಳಿಗೆ ಭೂಮಿ ಪಡೆದುಕೊಂಡು ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಬಳಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ಈ ಎಲ್ಲವೂಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಇಲಾಖೆ ಸಂಪೂರ್ಣ ಬದ್ಧವಾಗಿದೆ ಎಂದರು.
ಕರ್ನಾಟಕ ಐಟಿ-ಬಿಟಿ ವಲಯದಲ್ಲಿ ವಿಶ್ವದಲ್ಲಿಯೇ ನಂಬರ್ 1 ಆಗಿದೆ, ಆದರೆ ಉತ್ಪಾದನಾ ಕ್ಷೇತ್ರದಲ್ಲಿ ಇನ್ನೂ ಪ್ರಗತಿಯಾಗಬೇಕಿದೆ, ತಮಿಳುನಾಡು, ಗುಜರಾತ್ ರಾಜ್ಯಗಳು ಈ ವಲಯದಲ್ಲಿ ಪ್ರಗತಿಯಾಗಿವೆ, ಈ ನಿಟ್ಟಿನಲ್ಲಿ ಕರ್ನಾಟಕವೂ ಸಹ ಉತ್ಪಾದನಾ ವಲಯದಲ್ಲಿ ದಿಟ್ಟ ಹೆಜ್ಜೆ ಇರಿಸಲಿದೆ.
ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ನೈಸರ್ಗಿಕ ಅವಲಬ್ಯತೆ, ಸೌಹಾರ್ದತೆ ವಾತಾವರಣವಿದೆ, ಹೀಗಾಗಿ ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮೈಸೂರು ಕರ್ನಾಟಕ, ಮಧ್ಯ ಕರ್ನಾಟಕ ಎಲ್ಲೆಡೆ ಕೈಗಾರಿಕೆಗಳು ವಿಸ್ತಾರವಾಗಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು ಎಂದರು.
ಕೈಗಾರಿಕೆಗಳಿಗೆ ನೀರು ಅತ್ಯಂತ ಅವಶ್ಯವಾಗಿ ಬೇಕು, ಬೆಂಗಳೂರು ಸುತ್ತ ನೀರಿನ ಲಭ್ಯತೆ ಕಡಿಮೆ, ಹೀಗಾಗಿ ವಿಜಯಪುರ, ಬಾಗಲಕೋಟೆ ನೀರಿನ ಲಭ್ಯತೆಯೂ ಅಧಿಕ ಪ್ರಮಾಣದಲ್ಲಿದೆ. ಹೀಗಾಗಿ ಈ ಎಲ್ಲ ಕೈಗಾರಿಕೆಗಳು ಈ ಭಾಗಕ್ಕೆ ಬರಲು ಆಸಕ್ತಿ ತೋರುವುದು ಹೆಚ್ಚು, ಈ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಪೂರಕವಾದ ಭೂಮಿ, ನೀರು, ವಿದ್ಯುತ್ ಶಕ್ತಿ ಸೇರಿದಂತೆ ಅಗತ್ಯ ಸೌಕರ್ಯ ಒದಗಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದರು.
ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೈಗಾರಿಕೆಗಳು ಯಾವ ರೀತಿ ಯುವ ಸಂಪನ್ಮೂಲ ಅಗತ್ಯವಿದೆ ಎಂದು ಮಾಹಿತಿ ಸಂಗ್ರಹಿಸಿ ಅದಕ್ಕೆ ಪೂರಕವಾಗಿಯೇ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ನಿಟ್ಟಿನಲ್ಲಿ ಪಠ್ಯಕ್ರಮ ಬದಲಾವಣೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ ಎಂದರು.
ಹಿಂದಿನ ಸರ್ಕಾರದಲ್ಲಿ ಕೊರೊನಾ ಸಂದರ್ಭದಲ್ಲಿ ಹೊಡೆದ ಲೂಟಿ, ನೀರಾವರಿ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ನಡೆದ ಶೇ.40 ರಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ಸೇರಿದಂತೆ ಎಲ್ಲವನ್ನೂ ಸಹ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಲಿದೆ ಎಂದು ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಅನಾವಶ್ಯಕವಾಗಿ ಹಿಜಾಬ್, ಹಲಾಲ್ ಎನ್ನುವ ಅರ್ಥವಿಲ್ಲದ ವಿಚಾರಗಳನ್ನು ಮಾತ್ರ ಬಿತ್ತಿ ಕೋಮುದ್ವೇಷ ಬಿತ್ತಿದೆ, ಆದರೆ ನಮ್ಮ ಸರ್ಕಾರ ಎಲ್ಲ ಸಮಾಜಗಳ ರಕ್ಷಣೆಗೆ ಬದ್ಧವಾಗಿದೆ ಎಂದರು.
ಬಿಜೆಪಿ ಹಾಗೂ ಆರ್‍ಎಸ್‍ಎಸ್ ತನ್ನ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಹೊರಟಿತ್ತು, ಉರಿಗೌಡ-ನಂಜೇಗೌಡದಂತ ಗಿರಾಕಿಗಳನ್ನು ಹುಟ್ಟಿಸಿದ್ದು ಬಿಜೆಪಿ, ಈ ಎಲ್ಲವನ್ನೂ ಪಠ್ಯಪುಸ್ತಕದಲ್ಲಿ ಅಳವಡಿಸಲು ಹೊರಟಿತ್ತು, ಮಕ್ಕಳು ಅಣ್ಣ ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ, ಕೆಂಪೆಗೌಡರನ್ನು ಓದಬೇಕು, ಇವರ ಸಾಧನೆ ಪಠ್ಯದಲ್ಲಿ ಇರಬೇಕು ಎಂದರು.ಪಠ್ಯದಲ್ಲಿ ಕೇಸರಿಕರಣ ಎನ್ನುವುದು ಒಪ್ಪುವುದಿಲ್ಲ, ಕೇಸರಿ ಎಂದರೆ ಅದು ಬಿಜೆಪಿ ಆಸ್ತಿಯಲ್ಲ, ಕೇಸರಿಯನ್ನು ಅವರಿಗೆ ಬರೆದುಕೊಟ್ಟಿಲ್ಲ, ಎಲ್ಲ ದೇವಾಲಯಗಳಲ್ಲಿಯೂ ಕೇಸರಿ ಇದೆ, ಆದರೆ ಬಿಜೆಪಿ ಕೇಸರಿಕರಣ ಎಂದು ಹೇಳಿ ಪಠ್ಯಪುಸ್ತಕವನ್ನು ಆರ್‍ಎಸ್‍ಎಸ್ ಅಜೆಂಡಾ ಅಳವಡಿಸಿತ್ತು ಎಂದರು. ಮೀಸಲಾತಿ ವಿಷಯವಾಗಿ ಬಿಜೆಪಿ ನಾಟಕವಾಡಿತ್ತು, ಕೇವಲ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಪ್ರಮಾಣ ಏರಿಕೆ ಎಂದು ಬಿಜೆಪಿ ಘೋಷಣೆ ಮಾಡಿತ್ತು, ಇದು ಕೇವಲ ನಾಟಕ ಎಂದರು. ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು ಕೂಡಲೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಾಗುವುದು ಎಂದರು.