ಪಂಜರ ಕಾಳಗದಲ್ಲಿ ಮಸ್ಕ್‌ಗೆ ಆಸಕ್ತಿಯಿಲ್ಲ

ನ್ಯೂಯಾರ್ಕ್, ಆ.೧೩- ಈಗಾಗಲೇ ಜಾಗತಿಕ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಟೆಕ್ ದೈತ್ಯರಾದ ಇಲಾನ್ ಮಸ್ಕ್ ಹಾಗೂ ಮಾರ್ಕ್ ಝುಕರ್‌ಬರ್ಗ್ ನಡುವಿನ ಪಂಜರದ ಕಾಳಗದ ಬಗ್ಗೆ ಅನಿಶ್ಚಿತತೆ ಮನೆಮಾಡಿದೆ. ಪಂಜರಕಾಳಗದ ಬಗ್ಗೆ ಮಸ್ಕ್‌ಗೆ ಯಾವುದೇ ರೀತಿಯಲ್ಲಿ ಆಸಕ್ತಿ ಇಲ್ಲ, ಹಾಗಾಗಿ ಸದ್ಯ ಎಲ್ಲವನ್ನೂ ಮರೆತು ನಾವು ಮುಂದೆ ಸಾಗಬೇಕಿದೆ ಎಂದು ನಿರಾಶಾದಾಯಕ ರೀತಿಯಲ್ಲಿ ಮೆಟಾ ಸಂಸ್ಥೆಯ ಮಾಲಕ ಝುಕರ್‌ಬರ್ಗ್ ತಿಳಿಸಿದ್ದಾರೆ.
ತನ್ನದೇ ಮಾಲಕತ್ವದ ಸಾಮಾಜಿಕ ಜಾಲತಾಣ ಥ್ರೆಡ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಝುಕರ್‌ಬರ್ಗ್, ಪಂಜರ ಕಾಳಗದ ಬಗ್ಗೆ ನಾನು ಮಸ್ಕ್‌ಗೆ ದಿನಾಂಕ ಒದಸಿದ್ದೆ. ಆದರೆ ಮಸ್ಕ್ ಮಾತ್ರ ನೆಪ ನೀಡುವ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ನಾನು ಪಂಜರದ ಕಾಳಗಕ್ಕೆ ತಯಾರಿದ್ದೇನೆ ಎಂದು ಮಸ್ಕ್ ಹೇಳಿಕೆ ನೀಡಿದ್ದರೂ ಅಧಿಕೃತವಾಗಿ ದಿನಾಂಕವನ್ನು ಘೋಷಿಸಿರಲಿಲ್ಲ. ಇನ್ನು ಕಳೆದ ಜೂನ್‌ನಲ್ಲಿ ಪಂಜರದ ಕಾಳಗದ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ಇಬ್ಬರೂ ಬಿಲಿಯನೇರ್‌ಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದರು. ಅಲ್ಲದೆ ಜುಲೈನಲ್ಲಿ ಎಕ್ಸ್ (ಟ್ವಿಟರ್)ನ ಪ್ರತಿಸ್ಪರ್ಧಿಯಾಗಿ ಝುಕರ್‌ಬರ್ಗ್ ಅವರು ಥ್ರೆಡ್ ಅಪ್ಲಿಕೇಶನ್ ಆರಂಭಿಸಿದ ಬಳಿಕ ಇವರಿಬ್ಬರ ನಡುವಿನ ಶೀತಲ ಸಮರ ಮತ್ತಷ್ಟು ತೀವ್ರಗೊಂಡಿತ್ತು. ಸದ್ಯ ಮೂಲಗಳ ಪ್ರಕಾರ ಇಟಲಿಯಲ್ಲಿ ಪಂಜರ ಕಾಳಗ ನಡೆಯಲಿದೆ ಎಂದು ಹೇಳಲಾಗಿದ್ದರೂ ಅಧಿಕೃತ ದಿನಾಂಕ ಇನ್ನೂ ಘೋಷಣೆಯಾಗದೇ ಇರುವುದು ಆಟದಲ್ಲಿ ಸಹಜವಾಗಿಯೇ ಅನಿಶ್ಚಿತತೆ ಮನೆ ಮಾಡಿದೆ.