ಪಂಚ ಗ್ಯಾರಂಟಿ’ ಯೋಜನೆ ನಿಲ್ಲಿಸೋಲ್ಲವದಂತಿಗಳಿಗೆ ಕಿವಿಗೊಡಬೇಡಿ

 

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ. ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಸರ್ಕಾರ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ‘ಗ್ಯಾರಂಟಿ ಸಮಾವೇಶ’ ಆಯೋಜಿಸುತ್ತಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹಾಗೂ ತಾಲೂಕಿನ ಆನಗೋಡು ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ‘ಗ್ಯಾರಂಟಿ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಪ್ರತಿ ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳ ಸೌಲಭ್ಯ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ಈ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.ಕೆಲವರು ಈ ಯೋಜನೆಗಳನ್ನು ತಪ್ಪಿಸಬೇಕೆಂಬ ಉದ್ದೇಶದಿಂದಲೇ ಇಲ್ಲಸಲ್ಲದ ವದಂತಿಗಳನ್ನು ಫಲಾನುಭವಿಗಳ ತಲೆಯಲ್ಲಿ ತುಂಬುತ್ತಿದ್ದಾರೆ. ಯಾರೂ ಕೂಡ ಈ ಊಹಾಪೋಹಗಳಿಗೆ ಕಿವಿಗೊಡಬಾರದು. ಈ ಯೋಜನೆಗಳು ಇನ್ನೂ ಹತ್ತು ವರ್ಷಗಳು ಇರಬೇಕು. ಬಡವರಿಗೆ, ತಾಯಂದಿಯರಿಗೆ ಈ ಸೌಲಭ್ಯ ತಲುಪಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಯಾವುದೇ ಕಾರಣಕ್ಕೂ ಫಲಾನುಭವಿಗಳು ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ರಾಮಸ್ವಾಮಿ, ಡಿ.ಎಂ. ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ, ಸಿಡಿಪಿಒ ಅಭಿಕುಮಾರ್, ತಾಪಂ ಇಒ ರಾಮಭೋವಿ, ಕಂದಾಯ ಅಧಿಕಾರಿ ಚಂದ್ರಪ್ಪ, ಕೆಇಬಿ ಎಇಇ ತೀರ್ಥೇಶ್, ಶ್ರೀನಿವಾಸ್, ತೇಜವರ್ಧನ್ ಸೇರಿದಂತೆ ಇನ್ನಿತರರಿದ್ದರು.ಸಂಜೀವಿನಿ ಮಾಸಿಕ ಸಂತೆಮೇಳ: ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದಲ್ಲಿ ಗ್ರಾಪಂ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, 42 ಗ್ರಾಪಂ ಮಟ್ಟದ ಒಕ್ಕೂಟಗಳ ಮತ್ತು ವಿಶ್ವಬಂಧು ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಆಶ್ರಯದಲ್ಲಿ ದಿನಬಳಿಕೆ ವಸ್ತುಗಳು, ಆಹಾರ ಪದಾರ್ಥಗಳು, ಕರಕುಶಲ ವಸ್ತುಗಳು ಮತ್ತು ಗೃಹೋಪಯೋಗಿ ವಸ್ತುಗಳ ‘ಸಂಜೀವಿನಿ ಮಾಸಿಕ ಸಂತೆಮೇಳ’ಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಚಾಲನೆ ನೀಡಿದರು.