ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ನಾನು ಕಾರಣ

ಗೌರಿಬಿದನೂರು.ಮಾ೧೪:ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡು ಅರ್ಹ ಫಲಾನುಭವಿಗಳಿಗೆ ತಲುಪಲು ಸರ್ಕಾರಕ್ಕೆ ನಾನು ನೀಡಿರುವ ಬಾಹ್ಯ ಬೆಂಬಲವು ಕಾರಣವಾಗಿದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.
ನಗರದ ಆಚಾರ್ಯ ಕಾಲೇಜು ಮೈದಾನದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ಸಾರಿಗೆ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇಂಧನ ಇಲಾಖೆ ಹಾಗೂ ಯುವ ಸಬಲೀಕರಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ರಾಜ್ಯ ಸರ್ಕಾರದ ಶಕ್ತಿಯೋಜನೆ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಗೃಹಜ್ಯೋತಿ ಮತ್ತು ಯುವನಿಧಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಆಡಳಿತದಲ್ಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರವು ನೀಡಿದ್ದ ಐದು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಫಲಾನುಭವಿಗಳಿಗೆ ದೊರೆತಿದ್ದು, ಅದರ ಲಾಭ ಪಡೆದಿರುವ ಫಲಾನುಭವಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಸೇರಿಸಿ ಸರ್ಕಾರದ ಸಾಧನೆಯನ್ನು ಪ್ರದರ್ಶಿಸುವ ಸಮಾವೇಶ ಇದಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಪಣತೊಟ್ಟಿದ್ದು ಸುಮಾರು ೫೦೦ ಕೋಟಿ ವಿಶೇಷ ಅನುದಾನವನ್ನು ತರುವ ಪ್ರಯತ್ನ ಮಾಡಲಾಗಿದೆ. ನನಗೆ ಬೆನ್ನೆಲುಬಾಗಿ ತಾಲ್ಲೂಕು ಮಟ್ಟದಲ್ಲಿ ದಕ್ಷ ಅಧಿಕಾರಿಗಳ ತಂಡ ದೊರೆತಿದೆ. ಇವರೆಲ್ಲರ ಸಹಕಾರದಿಂದ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ,ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಆಸರೆಯಾಗಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಮಹೇಶ್ ಎಸ್.ಪತ್ರಿ, ತಾ.ಪಂ ಇಒ ಜಿ.ಕೆ.ಹೊನ್ನಯ್ಯ, ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ, ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮನಿಷಾ, ಸಿಪಿಐ ಕೆ.ಪಿ.ಸತ್ಯನಾರಾಯಣ, ಸಿಡಿಪಿಒ ಕೆ.ರವಿ, ಆಹಾರ ನಿರೀಕ್ಷಕರಾದ ಜಯಪ್ರಕಾಶ್, ಬೆಸ್ಕಾಂ ಎಇಇ ಎಂ.ಆರ್.ಪರಮೇಶ್ವರಪ್ಪ, ಸಾರಿಗೆ ಘಟಕ ವ್ಯವಸ್ಥಾಪಕರಾದ ಶಿವಪ್ಪ, ಮುಖಂಡರಾದ ಎಸ್.ರೂಪ, ಅಶ್ವತ್ಥಮ್ಮ, ಮೊಮಿನ್ ತಾಜ್, ಶಬನಾಅಸ್ಲಾಂ, ಪದ್ಮಾವತಮ್ಮ, ಅಬುಬೇಕರ್, ಲಕ್ಷ್ಮಿನಾರಾಯಣಪ್ಪ, ರಾಜಕುಮಾರ್, ಫರೀದ್, ವಿ.ಅಮರನಾಥ್, ಜೆ.ಕಾಂತರಾಜು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾ.ಪಂ ಪಿಡಿಒ ಅಧಿಕಾರಿಗಳು ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.