ಪಂಚಾಯ್ತಿ ಸಮರ ಬಿರುಸಿನ ಮತದಾನ

ಬೆಂಗಳೂರು, ಡಿ. ೨೨- ಗ್ರಾಮ ಪಂಚಾಯಿತಿಯ ಮೊದಲ ಹಂತ ಚುನಾವಣೆಗೆ ಇಂದು ಮತದಾನ ಶಾಂತಿಯುತವಾಗಿ ನಡೆದಿದ್ದು, ಕೆಲವೆಡೆ ಚಿನ್ಹೆ ಅದಲು-ಬದಲು ಗೊಂದಲ, ಇನ್ನೂ ಹಲವೆಡೆ ಮತದಾನ ಬಹಿಷ್ಕಾರ, ಒಂದೆರೆಡೆ ಗ್ರಾಮಗಳಲ್ಲಿ ಕೈ ಕೈ ಮಿಲಾಯಿಸಿರುವ ಘಟನೆ ಹೊರತುಪಡಿಸಿ, ಬಹುತೇಕ ಮತದಾನ ಶಾಂತಿಯುತವಾಗಿ ನಡೆದಿತ್ತು.
ಮಾಗಿ ಚಳಿ ಮುಂಜಾನೆ ಆವರಿಸಿದ್ದರಿಂದ ಮೊದಲಿಗೆ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕಿದ್ದ ಮತದಾರ ನೆತ್ತಿಯ ಮೇಲೆ ಬಿಸಿಲು ಚುರುಗುಡುತ್ತಿದಂತೆ ಮತದಾನ ಕೂಡ ಬಿರುಸುಗೊಂಡಿತ್ತು.
ಮಧ್ಯಾಹ್ನ ೨ರ ವೇಳೆಗೆ ಸರಾಸರಿ ಶೇ. ೫೦ ರಿಂದ ೫೫ ರಷ್ಟು ಜನ ಮತ ಚಲಾಯಿಸಿದ್ದರು.
ಇಂದಿನ ಮತದಾನದ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ಕೊರೊನಾ ನಿಯಮಗಳನ್ನು ಪಾಲಿಸಲಾಗಿತ್ತು. ಮತಗಟ್ಟೆ ಬರುವ ಪ್ರತಿ ಮತದಾರರನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಿ, ಸ್ಯಾನಿಟೈಸರ್‌ನ್ನು ಕೈಗಳಿಗೆ ಹಾಕಿ ನಂತರವೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.
ಈ ಕಾರ್ಯಕ್ಕಾಗಿ ಪ್ರತಿ ಮತಗಟ್ಟೆಯಲ್ಲೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ.
ಮತಗಟ್ಟೆಯಲ್ಲಿ ಕೊರೊನಾ ನಿಯಮ ಪಾಲನೆಯಾಗದೆ ಮತಗಟ್ಟೆಯ ಹೊರಗೆ ಜನ ಗುಂಪು ಗುಂಪಾಗಿ ನಿಂತಿದ್ದು, ಕೊರೊನಾ ನಿಯಮಗಳು ಮತಗಟ್ಟೆಯ ಹೊರಗೆ ಪಾಲನೆ ಮಾಡದಿದ್ದರೂ ಮತಗಟ್ಟೆ ಸಿಬ್ಬಂದಿ ಮೌನ ವಹಿಸಿದ್ದು ಕಂಡು ಬಂತು.
ಕೊರೊನಾ ಪರಿಸ್ಥಿತಿಯಲ್ಲೂ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದ್ದು, ಬಹುತೇಕ ಹಳ್ಳಿಗಳಲ್ಲಿ ಮತದಾರರು ಮತ ಹಾಕಲು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ರಾಜ್ಯದ ೩೦೧೯ ಗ್ರಾಮ ಪಂಚಾಯ್ತಿಗಳ ೪೮೦೪೮ ಸ್ಥಾನಗಳಿಗೆ ಇಂದು ಮತದಾನ ನಡೆದಿದ್ದು, ಈ ಪೈಕಿ ೪೩೭೭ ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿದೆ. ಉಳಿದಂತೆ ಇಂದು ೪೩೨೩೮ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಈ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಣದಲ್ಲಿರುವ ೧೧೭೩೮೩ ಅಭ್ಯರ್ಥಿಗಳ ರಾಜಕೀಯ ಭವಿಷ್ಯಕ್ಕೆ ಮತದಾರ ಇಂದು ಮುಂದ್ರೆ ಒತ್ತಿದ್ದಾನೆ.
ಚಿಕ್ಕಮಗಳೂರಿನ ೧೫ ಗ್ರಾಮ ಪಂಚಾಯ್ತಿಗಳಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಮತದಾನ ಬಹಿಷ್ಕರಿಸಲಾಗಿದೆ.
ಚಿಹ್ನೆ ಬದಲಾವಣೆ ಮತದಾನ ಸ್ಥಗಿತ
ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಚಿಹ್ನೆ ಬದಲಾವಣೆಯ ಗೊಂದಲದಿಂದ ಮತದಾನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಬಳ್ಳಾರಿ ತಾಲ್ಲೂಕಿನ ಶಂಕರೇಬಂಡೆ ಗ್ರಾ.ಪಂ. ನ ೭ನೇ ವಾರ್ಡ್‌ನ ಸೊಲಮಾಮಿಡಿ ಗ್ರಾಮದ ಅಭ್ಯರ್ಥಿ ಪದ್ಮಾವತಿ ಅವರಿಗೆ ನೀಡಲಾಗಿದ್ದ ಮಡಿಕೆ ಚಿಹ್ನೆಯ ಬದಲಿಗೆ ಮತಪತ್ರದಲ್ಲಿ ಸಿಲಿಂಡರ್ ಚಿಹ್ನೆ ಬಂದಿದ್ದು, ಅಭ್ಯರ್ಥಿಯ ಆಗ್ರಹದ ಮೇರೆಗೆ ಮತದಾನ ಸ್ಥಗಿತಗೊಂಡಿದೆ.
ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಗಣದಿನ್ನಿ ಗ್ರಾ.ಪಂ. ವ್ಯಾಪ್ತಿಯ ಕೆ.ತುಪ್ಪದೂರ ಗ್ರಾಮದ ಮತಗಟ್ಟೆಯಲ್ಲಿ ಮತಪತ್ರದಲ್ಲಿನ ದೋಷ ಕಾರಣದಿಂದ ಮತದಾನ ಸ್ಥಗಿತಗೊಂಡಿದೆ.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಶ್ರೀಚಂದ್ ಗ್ರಾ.ಪಂ.ನ ೨ನೇ ವಾರ್ಡ್‌ನಲ್ಲಿ ಅಭ್ಯರ್ಥಿಗೆ ಹಲ್ಲುಜ್ಜುವ ಪೇಸ್ಟ್ ಚಿಹ್ನೆ ನೀಡಲಾಗಿತ್ತು. ಆದರೆ ಮತ ಪತ್ರದಲ್ಲಿ ಹಲ್ಲುಜ್ಜುವ ಬ್ರಷ್ ಮುದ್ರಣವಾಗಿದೆ ಎಂದು ಅಭ್ಯರ್ಥಿ ಗಜಾನಂದ ದತ್ತಪ್ರಸಾದ್ ಎಂಬುವರು ತಕರಾರು ತೆಗೆದ ಕಾರಣ ಮತದಾನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ದಾವಣಗೆರೆ ತಾಲ್ಲೂಕಿನ ಹೆಬ್ಬಾಳು ಗ್ರಾ.ಪಂ.ನಲ್ಲಿ ಮತಗಟ್ಟೆ ಸಂಖ್ಯೆ ಅದಲು ಬದಲಾಗಿ ಮತದಾನ ಆರಂಭ ತಡವಾಯಿತು.
ಕಾರವಾರ ತಾಲ್ಲೂಕಿನ ಸಿರವಾರ ಪಬ್ಲಿಕ್ ಶಾಲೆಯ ಮತಗಟ್ಟೆಯ ನಿಷೇಧಿತ ಪ್ರದೇಶಕ್ಕೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಪೊಲೀಸರ ಜತೆ ವಾಗ್ವಾದಕ್ಕಿಳಿದಿದ್ದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕನಕಪುರ ತಾಲ್ಲೂಕಿನ ಹೊಸದುರ್ಗ ಗ್ರಾ.ಪಂ.ನ ಏರ್‌ಗೇರೆಯ ಮತಗಟ್ಟೆಯಲ್ಲಿ ಗಲಾಟೆ ನಡೆದಿದ್ದು, ಮಹಿಳಾ ಅಭ್ಯರ್ಥಿಯೊಬ್ಬರ ಪತಿ ಮತದಾರರೊಬ್ಬರಿಗೆ ಕಣ್ಣು ಕಾಣಿಸುವುದಿಲ್ಲ, ಕೈ ಸರಿಯಿಲ್ಲ ಎಂಬ ಕಾರಣ ನೀಡಿ ತಾವೇ ಮತದಾರರ ಜತೆ ಹೋಗಿ ಮತ ಚಲಾಯಿಸುತ್ತಿದ್ದರು. ಇದಕ್ಕೆ ಎದುರಾಳಿ ಅಭ್ಯರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರದಲ್ಲಿ ಪರಸ್ಪರ ಕೈ ಕೈ ಮಿಲಾಯಿಸುವ ಪ್ರಕರಣವೂ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದರಿಂದ ಮತದಾನ ಕೆಲ ಕಾಲ ಸ್ಥಗಿತಗೊಂಡಿದ್ದು, ನಂತರ ಮತದಾನ ಸುಗಮವಾಗಿ ನಡೆದಿದೆ.
ಕೆಲವೆಡೆ ಮತದಾರರಿಗೆ ಮತಗಟ್ಟೆಗೆ ಬರಲು ವಾಹನ ವ್ಯವಸ್ಥೆ ಮಾಡಲಾಗಿದ್ದು, ಆಟೋ, ಟಂಟಂಗಳಲ್ಲಿ ಮತದಾರರನ್ನು ಮತಗಟ್ಟೆಗೆ ಕರೆತಂದು ಮತ ಚಲಾಯಿಸುತ್ತಿರುವ ದೃಶ್ಯಗಳು ಕಂಡು ಬಂದವು.
ಗಣ್ಯರ ಮತದಾನ
ಗ್ರಾಮ ಪಂಚಾಯ್ತಿ ಚುನಾವಣೆಗಳಿಗೆ ಇಂದು ಬೆಳಗ್ಗೆಯೇ ವಿವಿಧೆಡೆ ಸ್ವಾಮೀಜಿಗಳು, ಗಣ್ಯರು ಮತ ಚಲಾಯಿಸಿದ್ದು, ತುಮಕೂರಿನ ಶ್ರೀ ಸಿದ್ಧಗಂಗಾ ಶ್ರೀಗಳು ಮತ ಸಿದ್ಧಗಂಗಾ ಮಠದ ಆವರಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಚಿತ್ರದುರ್ಗ ತಾಲ್ಲೂಕಿನ ಮಠದ ಕುರುಬರಹಟ್ಟಿ ಮತಗಟ್ಟೆಯಲ್ಲಿ ಶ್ರೀ ಮುರುಘಾಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಸಹ ಬೆಳಗ್ಗೆಯೇ ಮತ ಹಾಕಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿಯಲ್ಲಿ ಮತ ಹಾಕಿದರು
ಮಾಜಿ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ತುಮಕೂರಿನ ಸಿದ್ಧಾರ್ಥ ನಗರದಲ್ಲಿ ಮತ ಚಲಾಯಿಸಿದರು. ಬಂಟ್ವಾಳ ತಾಲ್ಲೂಕಿನ ತಳ್ಳಿಗೆ ಗ್ರಾ.ಪಂ. ಮತಗಟ್ಟೆಯಲ್ಲಿ ಮಾಜಿ ಸಚಿವ ರಮಾನಾಥ್ ರೈ ಮತ ಹಾಕಿದರು. ಬಳ್ಳಾರಿ ತಾಲ್ಲೂಕಿನ ಸಂಗನಕಲ್ಲು ಗ್ರಾಮದಲ್ಲಿ ೯೯ ವರ್ಷದ ಲಕ್ಷ್ಮಮ್ಮ ಎಂಬ ವೃದ್ಧೆ ಶಾಹಿ ಹಾಕಿರುವ ಬೆರಳನ್ನು ಛಾಯಾಚಿತ್ರಗಾರರ ಕಡೆಗೆ ತೋರಿಸಿ ಫೋಟೋಗೆ ಫೋಸ್ ನೀಡಿ ತಾವು ಎಂದೂ ಮತದಾನದಿಂದ ತಪ್ಪಿಸಿಕೊಂಡಿಲ್ಲ ಎಂದು ಹೇಳಿದರು.
ಬಾಗಲಕೋಟೆಯ ಅಂಗನವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ೯೮ ವರ್ಷದ ದಾನಮ್ಮ ಬಟಕುರ್ಕಿ ಅವರನ್ನು ಅವರ ಪುತ್ರ ಬಸಯ್ಯ ಹೊತ್ತುಕೊಂಡು ಬಂದ ಮತ ಚಲಾಯಿಸಲು ನೆರವಾದರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಉದ್ದೆಹೊಸಕೆರೆ ಮತಗಟ್ಟೆಯಲ್ಲಿ ರಾಮಣ್ಣ ಎಂಬ ವೃದ್ಧರು ಗಾಲಿ ಕುರ್ಚಿಯಲ್ಲಿ ಬಂದು ಮತ ಹಾಕಿದರು.
ಪ್ರತಿ ಮತಗಟ್ಟೆಯಲ್ಲೂ ಮತದಾರರನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಿ, ಸ್ಯಾನಿಟೈಸರ್ ನೀಡಿ ಒಳಬಿಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರದ ದಿ. ಸಚಿವ ಸುರೇಶ್ ಅಂಗಡಿ ಅವರ ತಾಯಿ ಸೋಮವ್ವ ಚ. ಅಂಗಡಿ ಅವರು ಕೆಕೆಕೊಪ್ಪ ಗ್ರಾಮದ ಮತಗಟ್ಟೆಗೆ ವೀಲ್ಹ್ ಚೇರ್‌ನಲ್ಲಿ ಬಂದು ಮತ ಚಲಾಯಿಸಿದರು.
ಹೃದಯಾಘಾತ
ಹೊಸಪೇಟೆ ತಾಲ್ಲೂಕಿನ ಹಂಪಿ ಗ್ರಾಮ ಪಂಚಾಯ್ತಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆ ತಾವರೇನಾಯಕ ಎಂಬುವರು ಹೃದಯಾಘಾತಕ್ಕೆ ಒಳಗಾಗಿರುವ ಘಟನೆಯೂ ನಡೆದಿದೆ.
ಪೂಜೆ
ಮತದಾನಕ್ಕೂ ಮೊದಲು ಹಲವೆಡೆ ಮತಪೆಟ್ಟಿಗೆಗಳಿಗೆ ಪೂಜೆ ಮಾಡಲಾಗಿದ್ದು, ಬೆಳಗಾವಿಯ ಕಿತ್ತೂರು ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ಮತಪೆಟ್ಟಿಗೆಗೆ ಪೂಜೆ ಮಾಡಿದ ನಂತರವೇ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಜಗಳೂರು ತಾಲೂಕಿನಲ್ಲಿ ಮಾರಾಮಾರಿ
ಮಕ್ಕಳು, ದೇವರ ಮೆಲೆ ಆಣೆ, ಪ್ರಮಾಣ ಮಾಡಿ ಮತ ಪ್ರಚಾರ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿಯಾಗಿ, ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜಗಳೂರು ತಾ. ಶೆಟ್ಟಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜಗಳೂರು ತಾಲೂಕಿನ ಮುಖಂಡ ಬಸಾಪುರ ರವಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದದಾರೆ. ದೇವಿಕೆರೆ ಗ್ರಾಪಂಗೆ ಒಳಪಟ್ಟ ಶೆಟ್ಟಿಗೊಂಡನಹಳ್ಳಿ ಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ಬಸಾವುರ ರವಿ ಶೆಟ್ಟಿಗೊಂಡನಹಳ್ಳಿ ಗ್ರಾಮದ ಅಭ್ಯರ್ಥಿ ಪರ

ಪ್ರಚಾರ ಕೈಗೊಂಡಿದ್ದ ವೇಳೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಸಂಭವಿಸಿದೆ ಎನ್ನಲಾಗಿದೆ.

ಪ್ರಚಾರದ ವೇಳೆ ಮಕ್ಕಳು, ದೇವರ ಮೇಲೆ ಆಣೆ ಮಾಡಿಸಿ ಮತ ಕೇಳುತ್ತಿದ್ದುದೇ ಎರಡೂ ಗುಂಪಿನ ಮಧ್ಯೆ ಘರ್ಷಣೆಗೆ ಕಾರಣವಾಗಿದೆ. ಗಿರಿಜಮ್ಮ, ಮಂಜಮ್ಮ ಎಂಬುವರ ಪರವಾಗಿ ಪ್ರಚಾರಕ್ಕೆ ಬಂದಿದ್ದ ರವಿ ಮತದಾರರಿಂದ ಮಕ್ಕಳು, ದೇವರ ಮೇಲೆ ಬಲ ವಂತವಾಗಿ ಆಣೆ ಮಾಡಿಸಿ ಮತ ಕೇಳುತ್ತಿದ್ದುದೇ ಇಷ್ಟೆಲ್ಲಾ ಮಾರಾಮಾರಿಗೆ ಕಿಡಿ ಹೊತ್ತಿಸಿದೆ. ಎರಡೂ ಗುಂಪಿನ ಮಧ್ಯೆ ಮಾತಿಗೆ ಮಾತು ಬೆಳೆದು, ಕೈ-ಕೈ ಮಿಲಾಯಿಸುವ ಹಂತ ತಲುಪಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಬಿಳಿಚೋಡು ಪೊಲೀಸರು ಸ್ಥಳಕ್ಕೆ ಧಾವಿಸಿ, ಬಸಾಪುರ ರವಿಯನ್ನು ತಮ್ಮ ವಶಕ್ಕೆ ಪಡೆದರು. ಎರಡು ಗುಂಪುಗಳ ಜಗಳವಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದುದನ್ನು ಪೊಲೀಸರು ತಿಳಿಗೊಳಿಸಿದರು.