ಪಂಚಾಯ್ತಿ ಚುನಾವಣೆ: ಪಿಟಿಪಿ ಪುತ್ರನಿಗೆ ಸಹೋದರನ ಸಡ್ಡು

ಬಳ್ಳಾರಿ ಡಿ 20 : ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಹೋಬಳಿಯ ಲಕ್ಷ್ಮೀಪುರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮಾಜಿ ಸಚಿವ, ಹಾಲಿ ಹಡಗಲಿ ಶಾಸಕ ಪಿ.ಟಿ ಪರಮೇಶ್ವರ ನಾಯ್ಕ ಅವರ ಪುತ್ರ ಪಿ.ಟಿ ಭರತ್‍ಗೆ ಸಡ್ಡು ಹೊಡೆದು ಶಾಸಕರ ಸಹೋದರ ಶಿವಾಜಿ ನಾಯ್ಕ ಕಣಕ್ಕಿಳಿದಿದ್ದು ಈ ಇಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಲಕ್ಷ್ಮೀಪುರ ಶಾಸಕರ ಸ್ವಂತ ಗ್ರಾಮ. ಕಳೆದ ಬಾರಿ ಇಲ್ಲಿ ಪುತ್ರ ಪಿ.ಟಿ. ಭರತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಗೆದ್ದು ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಈಗ ಎರಡನೇ ಬಾರಿ ಅದೇ ವಾರ್ಡ್‍ನಿಂದ ಕಣಕ್ಕಿಳಿದಿರುವ ಭರತ್ ಅವರಿಗೆ ಶಾಸಕ ಪಿಟಿಪಿ ಅವರ ಸಹೋದರ ಶಿವಾಜಿ ನಾಯ್ಕ ಎದುರಾಳಿಯಾಗಿ ಸ್ಪರ್ಧೆಗೆ ನಿಂತಿರುವುದು ಜಿದ್ದಾಜಿದ್ದಿಗೆ ಕಾರಣವಾಗಿದೆ. ಈ ಮೊದಲು ಶೀವಾಝಿ ನಾಯ್ಕ ಕಾಂಗ್ರೆಸ್ ನಲ್ಲಿದ್ದರು. ಆದರೆ ಈಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಇದರಿಂದಾಗಿ ಈಗ ಬಿಜೆಪಿ-ಕಾಂಗ್ರೆಸ್ ಮುಖಂಡರಿಗೆ ಈ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.ಶಿವಾಜಿ ನಾಯ್ಕ ಅವರ ಪತ್ನಿ ಕುಮಾರಿ ಶಿವಾಜಿ ನಾಯ್ಕ ಕೂಡ ಸತ್ತೂರು ಗೊಳ್ಳರಹಟ್ಟಿ ವಾರ್ಡ್‍ನಿಂದ ಅಖಾಡಕ್ಕೆ ಇಳಿದಿದ್ದಾರೆ.