ಪಂಚಾಯ್ತಿ ಗೆದ್ದ ಅಭ್ಯರ್ಥಿಗಳಿಗೆ ತರಬೇತಿ

ಬೆಂಗಳೂರು, ಡಿ. ೩೧- ರಾಜ್ಯದ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಗೆದ್ದಿರುವ ಅಭ್ಯರ್ಥಿಗಳಿಗೆ ತರಬೇತಿ ಮತ್ತು ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮವನ್ನು ಜನವರಿ ೧೯ ರಿಂದ ಮಾರ್ಚ್ ೨೬ ರವರೆಗೂ ನಡೆಸಲಾಗುವುದು ಎದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ರಾಜ್ಯದ ೫೭೬೨ ಗ್ರಾಮ ಪಂಚಾಯ್ತಿಗಳ ೯೨,೧೩೧ ಸದಸ್ಯರುಗಳು ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ೨೮೫ ತರಬೇತಿ ಕೇಂದ್ರಗಳ ಮುಖೇನ ತಾಲ್ಲೂಕು ಹಂತದಲ್ಲಿ ೧೦ ತಂಡಗಳಲ್ಲಿ ತರಬೇತಿ ನೀಡಲಾಗುವುದು. ಇದಕ್ಕಾಗಿ ೯೦೦ ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಂಗ ಸಂಸ್ಥೆಯಾದ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ನೂತನವಾಗಿ ಚುನಾಯಿತರಾಗಿರುವ ಗ್ರಾ.ಪಂ. ಸದಸ್ಯರುಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ನಡೆಸಲಿದೆ ಎಂದು ಅವರು ಹೇಳಿದರು.
ಚುನಾವಣೆ ಮುಗಿದಿದೆ. ಸ್ಪರ್ಧೆ ಪ್ರತಿಸ್ಪರ್ಧೆ ಎಲ್ಲಾ ಮುಗಿಯಿತು ಇನ್ನು ಏನಿದ್ದರೂ ಗ್ರಾಮಗಳ ಅಭಿವೃದ್ಧಿ. ಹಾಗಾಗಿ ಗೆದ್ದಿರುವ ಸದಸ್ಯರುಗಳು ಎಲ್ಲವನ್ನು ಮರೆತು ತರಬೇತಿಗಳಲ್ಲಿ ಪಾಲ್ಗೊಂಡು ಗ್ರಾಮಾಭಿವೃದ್ಧಿಗೆ ಮುಂದಾಗಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಸದಸ್ಯರುಗಳಿಗೆ ಎಲ್ಲ ನೆರವು, ಬೆಂಬಲ ನೀಡಲಿವೆ ಎಂದರು.
ಗೋಹತ್ಯೆ ನಿಷೇಧಕ್ಕೆ ಬೆಂಬಲ
ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಗೋಮಾಂಸ ತಿನ್ನುವವರಿಗೆ ಬೆಂಬಲ ನೀಡಿದ್ದವರನ್ನು ತಿರಸ್ಕರಿಸಿದ್ದಾರೆ. ಗೋಮಾತೆಯನ್ನು ತಾಯಿಯಂತೆ ನೋಡಿಕೊಳ್ಳುವವರನ್ನು ಬೆಂಬಲಿಸಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಈ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶೇ. ೬೦ ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ನಗರ, ಪಟ್ಟಣಗಳ ಪಕ್ಷವಲ್ಲ. ಗ್ರಾಮೀಣ ಪ್ರದೇಶದಲ್ಲೂ ಬೇರು ಬಿಟ್ಟಿರುವ ಪಕ್ಷ ಎಂದು ಈ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ ಎಂದರು.
ಗೋಮಾಂಸ ತಿನ್ನುವವರನ್ನು ಬೆಂಬಲಿಸಿದ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರಿಗೆ ಬೆಂಬಲ ನೀಡಿದವರನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಹಿಂದೂಸ್ತಾನ್ ಜಿಂದಾಬಾದ್ ಎಂದವರನ್ನು ಬೆಂಬಲಿಸಿದ್ದಾರೆ ಎಂದರು.
ಹನುಮಜಯಂತಿಯಂದು ನಾಟಿಕೋಳಿ ತಿಂದು ರಾಮಭಕ್ತರ ನಾಡಿನ ಜನರನ್ನೇ ಪರೋಕ್ಷವಾಗಿ ಅವಮಾನಿಸಿದ ನಾಯಕರೊಬ್ಬರ ಪಕ್ಷವನ್ನು ಜನ ಚುನಾವಣೆಯಲ್ಲಿ ತಿರಸ್ಕರಿಸುವ ಮೂಲಕ ಹನುಮನ ಭಕ್ತರಿಗೆ ಬೆಂಬಲ ನೀಡಿದ್ದಾರೆ ಎಂದು ಪರೋಕ್ಷವಾಗಿ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕರೊಬ್ಬರು ದಿನಕ್ಕೊಂದು ಸುಳ್ಳು ಹೇಳುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಅವರು ಏನೆನೋ ಮಾತನಾಡುತ್ತಾರೆ. ಗೋಮಾಂಸ ತಿನ್ನುವವರ ಪರ ನಿಂತಿದ್ದಾರೆ ಎಂದು ಸಿದ್ಧರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಈ ಚುನಾವಣೆಯಲ್ಲಿ ಎಸ್‌ಟಿಪಿಐ ಬೆಂಬಲಿತ ನಾಲ್ಕು ಜನ ಗೆದ್ದಿರಬಹುದು. ಆದರೆ ಅದರಿಂದ ಏನೂ ಆಗುವುದಿಲ್ಲ. ಎಸ್‌ಟಿಪಿಐನ ಬೆಂಬಲಕ್ಕೆ ನಿಂತಿರುವವರ ಬಗ್ಗೆ ಜನ ಜಾಗೃತಿ ವಹಿಸಿ ಅವರನ್ನೂ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಎಸ್‌ಟಿಪಿಐನ ಬ್ಯಾನ್ ಮಾಡಬೇಕು. ಸ್ವಲ್ಪ ಕಾಯಿರಿ ಏನು ಮಾಡಲಿಕ್ಕೆ ಸಾಧ್ಯವೋ ಅದನ್ನು ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದರು.