ಪಂಚಾಯ್ತಿ ಅಧ್ಯಕ್ಷ-ಉಪಾಧ್ಯಕ್ಷರ ಹುದ್ದೆ ಮೀಸಲಾತಿ ನಿಗದಿ ಕೊಟ್ಟೂರು ಹಡಗಲಿ ಹೆಚ್‍ಬಿಹಳ್ಳಿ ತಾಲೂಕಲ್ಲಿ ಮಾತ್ರ ಹಿಂದುಳಿದ ವರ್ಗಕ್ಕೆ ಅವಕಾಶ

ಬಳ್ಳಾರಿ, ಜ.03: ಗ್ರಾಮ ಪಂಚಾಯ್ತಿಗಳಲ್ಲಿ 30 ತಿಂಗಳ ಮೊದಲ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣೆ ಆಯೋಗವು ಮಾರ್ಗಸೂಚಿ ಹಾಗೂ ನಿರ್ದೇಶನ ನೀಡಿದ್ದು, ತಾಲ್ಲೂಕುವಾರು ನಿಗದಿಪಡಿಸಿದ ಮೀಸಲಾತಿ ಪಟ್ಟಿಯಲ್ಲಿ ಜಿಲ್ಲೆಯ ಕೊಟ್ಟೂರು ಹಡಗಲಿ ಹೆಚ್‍ಬಿಹಳ್ಳಿ ತಾಲೂಕಲ್ಲಿ ಮಾತ್ರ ಹಿಂದುಳಿದ ವರ್ಗದ ಐದು ಜನರು ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿದೆ. ಈ ತಾಲ್ಲೂಕಿನವರೂ ಸೇರಿ ಎಲ್ಲ ತಾಲ್ಲೂಕಿನ ಆಕಾಂಕ್ಷಿಗಳು ಸಾಮಾನ್ಯ ವರ್ಗದ ಶೇ 50 ರಷ್ಟು ಮೀಸಲಾತಿಯಲ್ಲಿ ಸ್ಪರ್ಧಿಸುವ ಅವಕಾಶವಿರುವುದರಿಂದ ಪೈಪೋಟಿ ಹೆಚ್ಚಲಿದೆ.
ಹಿಂದುಳಿದ ಬ ವರ್ಗಕ್ಕೆ ಹಡಗಲಿಯಲ್ಲಿ ಮಾತ್ರ ಒಂದು ಮೀಸಲಾತಿ ದೊರಕಿದೆ. ಹಿಂದುಳಿದ ಅ ವರ್ಗಕ್ಕೆ ಹಗರಿಬೊಮ್ಮನಹಳ್ಳಿಯಲ್ಲಿ 1 ಮತ್ತು ಹಡಗಲಿಯಲ್ಲಿ 2 ಸ್ಥಾನ ನಿಗದಿಯಾಗಿದ್ದು, ಎಲ್ಲವೂ ಮಹಿಳೆಗೆ ಮೀಸಲಾಗಿದೆ. ಕೊಟ್ಟೂರಿನಲ್ಲಿ 2 ಸ್ಥಾನವಿದ್ದು 1 ಮಹಿಳೆಗೆ ಮೀಸಲಾಗಿದೆ.
ಜಿಲ್ಲೆಯ 11 ತಾಲ್ಲೂಕುಗಳ ಪೈಕಿ ಎಂಟು ತಾಲ್ಲೂಕುಗಳಲ್ಲಿ ನಿಯಮದಂತೆ ಪರಿಶಿಷ್ಟ ಜಾತಿಪಂಗಡಕ್ಕೆ ಆದ್ಯತೆ ನೀಡಲಾಗಿದೆ.
ಒಂದೇ ಗ್ರಾಮ ಪಂಚಾಯ್ತಿಯಲ್ಲಿ ಏಕಕಾಲಕ್ಕೆ ಪರಿಶಿಷ್ಟ ಜಾತಿ ಅಥವಾ ಪಂಗಡದವರನ್ನೇ ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತಿಲ್ಲ. ಎರಡೂ ಹುದ್ದೆಗಳಲ್ಲಿ ಒಂದಕ್ಕೆ ಪರಿಶಿಷ್ಟ ಜಾತಿ ಮತ್ತು ಮತ್ತೊಂದಕ್ಕೆ ಪರಿಶಿಷ್ಟ ಪಂಗಡದವರನ್ನು ಆಯ್ಕೆ ಮಾಡುವಂತಿಲ್ಲ. ಎರಡೂ ಹುದ್ದೆಗಳಿಗೆ ಏಕಕಾಲಕ್ಕೆ ಮಹಿಳೆಯರನ್ನಾಗಲಿ, ಹಿಂದುಳಿದ ಅ ವರ್ಗ ಅಥವಾ ಬಿ ವರ್ಗದವರನ್ನಾಗಲಿ ಆಯ್ಕೆ ಮಾಡುವಂತಿಲ್ಲ.
ತಾಲ್ಲೂಕುವಾರು ಮೊದಲು ಅಧ್ಯಕ್ಷ ಹುದ್ದೆಗಳನ್ನು, ನಂತರ ಉಪಾಧ್ಯಕ್ಷ ಹುದ್ದೆಗಳನ್ನು ನಿಗದಿಪಡಿಸಬೇಕು. ಅಧ್ಯಕ್ಷರ ಆಯ್ಕೆ ಬಳಿಕವೇ ಉಪಾಧ್ಯಕ್ಷರ ಆಯ್ಕೆ ಮಾಡಬೇಕೆಂದು ಆಯೋಗ ಸೂಚಿಸಿದೆ.