ಪಂಚಾಯಿತಿ ಸದಸ್ಯರಿಗೆ ಹತ್ತು ಸಾವಿರ ರೂ.ಗಳ ಗೌರವಧನ, ಕಾರಿನ ಸೌಲಭ್ಯ: ಕಟೀಲ್ ಘೋಷಣೆ

ಕಲಬುರಗಿ,ನ.20: ಪುರ ಪಂಚಾಯಿತಿ ಸದಸ್ಯರಿಗೆ ಹತ್ತು ಸಾವಿರ ರೂ.ಗಳ ಗೌರವ ಧನ ಹಾಗೂ ಕೇರಳ ಮಾದರಿಯಲ್ಲಿ ಪಂಚಾಯಿತಿ ಸದಸ್ಯರಿಗೆ ಕಾರಿನ ಸೌಲಭ್ಯ ಕೊಡುವ ಕುರಿತು ಬಿಜೆಪಿ ಸರ್ಕಾರವು ಚಿಂತನೆ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲ್ ಅವರು ಘೋಷಿಸಿದರು.
ಶನಿವಾರ ಜೇವರ್ಗಿ ರಸ್ತೆಯಲ್ಲಿರುವ ಕೆಇಬಿ ಕಲ್ಯಾಣ ಮಂಟಪದ ಎದುರು ಶನಿವಾರ ಹಮ್ಮಿಕೊಂಡ ಜನಸ್ವರಾಜ್ ಬೃಹತ್ ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷವು ಅಧಿಕಾರ ನಡೆಸಿದರೂ ಸಹ ಪುರ, ಪಂಚಾಯಿತಿ ಸದಸ್ಯರಿಗೆ ಯಾವುದೇ ರೀತಿಯಲ್ಲಿ ಸೌಲಭ್ಯ ಕೊಡದೇ ನಿರ್ಲಕ್ಷಿಸಿದರು ಎಂದು ಟೀಕಿಸಿದರು.
ಮಹಾತ್ಮಾಗಾಂಧಿ ಅವರು ರಾಮರಾಜ್ಯದ ಕನಸು ಕಂಡಿದ್ದರು. ಅದನ್ನು ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮ ಸ್ವರಾಜ್ ಮೂಲಕ ನನಸು ಮಾಡುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೋಟಿ ರೂ.ಗಳ ಅನುದಾನ ಕೊಡುತ್ತಿದೆ. ಆ ಅನುದಾನವನ್ನು 2 ಕೋಟಿ ರೂ.ಗಳಿಗೆ ಹೆಚ್ಚಿಸಲಾಗುತ್ತದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮ್ ಸ್ವರಾಜ್ಯದ ಕನಸು ನನಸು ಮಾಡಲು ಪ್ರತಿಯೊಬ್ಬ ಸಂಸದರಿಗೆ ಆದರ್ಶ ಗ್ರಾಮ ಯೋಜನೆಯನ್ನೂ ಸಹ ಜಾರಿಗೆ ತಂದರು. ಆ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಸರ್ವ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕೇರಳ್ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಕಾರಿನ ಸೌಲಭ್ಯ ಇದೆ. ಅದೇ ಮಾದರಿಯಲ್ಲಿಯೂ ಸಹ ರಾಜ್ಯದಲ್ಲಿನ ಪಂಚಾಯಿತಿ ಸದಸ್ಯರಿಗೆ ಕಾರಿನ ಸೌಲಭ್ಯವನ್ನು ಕೊಡಲಾಗುತ್ತದೆ ಎಂದು ಅವರು ಹೇಳಿದರು.
ಪುರ, ಪಂಚಾಯಿತಿ ಸದಸ್ಯರು ಸ್ವಾಭಿಮಾನದಿಂದ ಕೆಲಸ ಮಾಡುವ ದಿಸೆಯಲ್ಲಿ ಬಿಜೆಪಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದು, ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ಅವರು ಕೋರಿದರು.