ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸ್ಯಾನಿಟೈಸ್

ಕೆ.ಆರ್.ಪೇಟೆ. ಮೇ.19: ಕೊರೋನಾ ಮಹಾಮಾರಿ ಗ್ರಾಮೀಣ ಪ್ರದೇಶಗಳಲ್ಲಿಯೂ ತಮ್ಮ ನೆಲೆಯನ್ನು ವಿಸ್ತರಿಸಿಕಿಳ್ಳುತ್ತಿದ್ದು ಬಳ್ಳೇಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸ್ಯಾನಿಟೈಸ್ ಮಾಡಲಾಗಿದ್ದು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಿಡಿಓ ವಿನೋದ್ ತಿಳಿಸಿದ್ದಾರೆ.
ಅವರು ಬಳ್ಳೇಕೆರೆ ಗ್ರಾಮದಲ್ಲಿ 19 ಸಕ್ರಿಯ ಪ್ರಕರಣಗಳಿದ್ದು ಸೋಂಕಿತರ ಮನೆಗಳಿಗೆ ತೆರಳಿ ಅವರಿಗೆ ಧೈರ್ಯ ಹೇಳಲಾಗಿದೆ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಅವರುಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಗ್ರಾಮೀಣ ಪ್ರದೇಶವಾದ್ದರಿಂದ ಹಾಲಿನ ಡೈರಿ, ಸೊಸೈಟಿ, ಟೀ ಅಂಗಡಿಗಳು, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, 45 ವರ್ಷ ಮೆಲ್ಪಟ್ಟು ಲಸಿಕೆ ಪಡೆಯದವರು ಕೂಡಲೇ ಲಸಿಕೆ ಪಡೆಯಬೇಕು ಆ ಮೂಲಕ ಕೊರೋನಾ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಸೋಂಕಿನ ಲಕ್ಷಣಗಳಿರುವವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೊರೋನಾ ಎಂದರೆ ಭಯಪಡುವ ಅಗತ್ಯವಿಲ್ಲ. ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖವಾಗುತ್ತದೆ. ಉದಾಸೀನ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಮನವಿ ಮಾಡಿದರು.