ಪಂಚಾಯಿತಿ ಚುನಾವಣೆ ಬಿಜೆಪಿ ಮೇಲುಗೈ

ಬೆಂಗಳೂರು, ಡಿ. ೩೦- ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ.
ರಾಜ್ಯದ ಹಳೆ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ಮೇಲುಗೈಗಾಗಿ ಪೈಪೋಟಿ ನಡೆದಿದ್ದು ಕೆಲವೆಡೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಗೆಲುವಿನ ನಗೆ ಬೀರಿದ್ದಾರೆ. ರಾಜ್ಯದಲ್ಲೆಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ.
ರಾಜ್ಯದ ೫,೭೨೮ ಗ್ರಾಮ ಪಂಚಾಯಿತಿಗಳ ಪೈಕಿ ೩೮೧೯ ಪಂಚಾಯಿತಿಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗಲಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ೧೮೨೧ ಗ್ರಾಮ ಪಂಚಾಯಿತಿಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ೭೩೮ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಪಕ್ಷೇತರರು ೪೮೭ ಪಂಚಾಯಿತಿಗಳಲ್ಲಿ ಪಾರಮ್ಯ ಮೆರೆದಿದ್ದಾರೆ ಎಂದು ಅನಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಪೊಲೀಸ್ ಬಿಗಿ ಭದ್ರತೆಯಲ್ಲಿ ಮತ ಎಣಿಕೆ ನಡೆದಿದ್ದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಜಯಗಳಿಸಿದ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರ ಮುಖದಲ್ಲಿ ಮಂದಹಾಸ ಮೂಡಿದರೆ ಪರಾಭವಗೊಂಡ ಅಭ್ಯರ್ಥಿಗಳು ತಲೆತಗ್ಗಿಸಿ ಹೋಗುತ್ತಿದ್ದುದು ಎಲ್ಲೆಡೆ ಕಂಡು ಬಂದಿತ್ತು.
ಗ್ರಾಮ ಸಮರದ ಫಲಿತಾಂಶದತ್ತ ಹಳ್ಳಿ ಜನರ ಚಿತ್ತ ನೆಟ್ಟಿದ್ದು, ಮತ ಎಣಿಕೆ ಕೇಂದ್ರಗಳ ಬಳಿ ಫಲಿತಾಂಶಕ್ಕಾಗಿ ಜನ ಕಾತುರದಿಂದ ಕಾಯುತ್ತಿದ್ದರು. ಹಲವು ಮತ ಎಣಿಕೆ ಕೇಂದ್ರಗಳ ಬಳಿ ಸೇರಿರುವ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ತಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆಯೇ ಮತ ಎಣಿಕೆ ಕೇಂದ್ರಗಳ ಬಳಿ ಸೇರಿರುವ ಬೆಂಬಲಿಗರು ಸಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಕುಣಿದು ಕೇಕೆ ಹಾಕಿ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು.
ಗೆದ್ದ ಅಭ್ಯರ್ಥಿಗಳು ತಮ್ಮ ತಮ್ಮ ಊರುಗಳಲ್ಲಿ ಮೆರವಣಿಗೆಯಲ್ಲಿ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ದೃಶ್ಯಗಳು ಸಾಮಾನ್ಯವೆನಿಸಿವೆ.
ರಾಜ್ಯದ ೨೨೬ ತಾಲ್ಲೂಕುಗಳ ೫೭೨೮ ಗ್ರಾಮ ಪಂಚಾಯ್ತಿಗಳಿಗೆ ಡಿಸೆಂಬರ್ ೨೨ ಮತ್ತು ೨೭ ರಂದು ೨ ಹಂತದಲ್ಲಿ ಮತದಾನ ಆಗಿದ್ದು, ಸುಮಾರು ೨ ಲಕ್ಷದ ೨೭ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರು.
ಈ ಚುನಾವಣೆಯಲ್ಲಿ ಮೊದಲ ಹಂತದಲ್ಲಿ ಶೇ. ೮೨.೦೪ ಮತ್ತು ೨ನೇ ಹಂತದಲ್ಲಿ ಶೇ. ೮೦.೭೧ ರಷ್ಟು ಮತದಾನ ಆಗಿತ್ತು. ಇಂದು ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬೆಂಬಲ ಪಡೆದಿದ್ದ ಅಭ್ಯರ್ಥಿಗಳ ನಡುವೆ ಗೆಲುವಿನ ಜಿದ್ದಾಜಿದ್ದಿ ನಡೆದಿದೆ.
ಇಂದು ಬೆಳಗ್ಗೆ ೮ ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಹಲವು ಸುತ್ತಿನ ಮತ ಎಣಿಕೆಯ ನಂತರ ಹೆಚ್ಚಿನ ಕ್ಷೇತ್ರಗಳಲ್ಲಿ ಆಡಳಿತರೂಢಾ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ವಿರೋಧ ಪಕ್ಷವಾದ ಕಾಂಗ್ರೆಸ್ ೨ನೇ ಸ್ಥಾನದಲ್ಲಿದ್ದು, ಜೆಡಿಎಸ್ ಮುನ್ನಡೆಯಲ್ಲಿ ೩ನೇ ಸ್ಥಾನಕ್ಕಿಳಿದಿದೆ.
ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಗೆಲುವಿಗಾಗಿ ಪೈಪೋಟಿ ನಡೆದಿದ್ದರೇ, ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷೆಯಂತೆ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆದಿದೆ.
ಹಳೆ ಮೈಸೂರು ಭಾಗದಲ್ಲಿ ಆರಂಭಿಕ ಮುನ್ನಡೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಗಿಂತ ಮುಂದೆ ಇದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಿಂತ ಹೆಚ್ಚಿನ ಮುನ್ನಡೆ ಹೊಂದಿದೆ.
ಹಳೇ ಮೈಸೂರು ಭಾಗದ ಕೆಲವು ಕಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಗೆಲುವಿಗಾಗಿ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ನಡುವೆ ನಡೆದಿರುವ ಹಣಾಹಣಿಯ ನಡುವೆಯೇ ಕೆಲವು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಮೇಲುಗೈ ಸಾಧಿಸಿ ರಾಜಕೀಯ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳಿಗೆ ಸಡ್ಡು ಹೊಡೆದಿದ್ದಾರೆ.
ಬೀದರ್ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮತ ಪತ್ರಗಳನ್ನು ಬಳಸಿರುವುದರಿಂದ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶಗಳು ಸಂಜೆಯ ವೇಳೆಗೆ ಪ್ರಕಟವಾಗಲಿದೆ.
ಬೀದರ್ ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಮೊದಲ ಬಾರಿಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಲಾಗಿದೆ.
ಕೋವಿಡ್ ಕಾರಣದಿಂದ ಗ್ರಾಮ ಪಂಚಾಯ್ತಿ ಚುನಾವಣೆಗಳನ್ನು ಸುರಕ್ಷತಾ ಕ್ರಮಗಳನ್ನು ಬಳಸಿಯೇ ನಡೆಸಲಾಗಿದ್ದು, ಮತ ಎಣಿಕೆ ಕೇಂದ್ರಗಳಲ್ಲೂ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ.
ಮತ ಎಣಿಕೆ ನಡೆದಿರುವ ಕೇಂದ್ರಗಳ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಜನ ಗುಂಪುಗೂಡದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.