ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆಗೆ ರಾಜೀವ್ ಗಾಂಧಿ ಕೊಡುಗೆ ಅಪಾರ : ಸಿ.ಪುಟ್ಟರಂಗಶೆಟ್ಟಿ

ಚಾಮರಾಜನಗರ, ಮೇ.22- ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬುವ ಜೊತೆಗೆ ಮಾಹಿತಿ ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯ ಮಾಡಿಸಿ ಕೊಟ್ಟ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಇಡೀ ದೇಶಕ್ಕೆ ಮಾದರಿ ಆಡಳಿತ ನೀಡಿದ ಮಹಾನ್ ಪುರುಷ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಬಣ್ಣಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಮಾಜಿ ಪ್ರಧಾನಿ ದಿ. ರಾಜೀವ್‍ಗಾಂಧಿ ಅವರ 32ನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ರಾಜೀವ್‍ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ರಾಜೀವ್‍ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಜನ ಸಾಮಾನ್ಯರಿಗೂ ಅಧಿಕಾರ ಹಂಚಿಕೆಯಾಗಬೇಕು ಎಂಬ ಹಂಬಲವನ್ನು ಹೊಂದಿದ್ದರು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ದೇಶಾದ್ಯಂತ ಬಲಪಡಿಸಿ, ದೆಹಲಿಯಿಂದ ಹಳ್ಳಿಯವರೆಗೆ ಅಧಿಕಾರ ವಿಕೇಂದ್ರೀಕರಣ ಗೊಳಿಸಿದ್ದರು. ಜಿ.ಪಂ. ಬಲವರ್ಧನೆ ಮೂಲಕ ನನ್ನಂಥ ಅನೇಕ ನಾಯಕರನ್ನು ಹುಟ್ಟಿ ಹಾಕಿದ ಕೀರ್ತಿ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ. ಅವರ ಪರಿಕಲ್ಪನೆಯಿಂದಾಗಿ ದೇಶ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ದೇಶದ ಅಭಿವೃದ್ದಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಬೆಳೆವಣಿಗೆಯಾಗಲು ಹೆಚ್ಚಿನ ಉತ್ತೇಜನ ನೀಡಿದ್ದರು. ಇದರ ಪರಿಣಾಮವಾಗಿ ಮೊಬೈಲ್ ಕ್ರಾಂತಿ, ಸಾಮಾಜಿಕ ಜಾಲತಾಣಗಳು ಅಭಿವೃದ್ದಿಯಾದವು. ಇತರೇ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಸಹ ಅಗ್ರ ಸ್ಥಾನದತ್ತ ಕೊಂಡೊಯ್ಯಲು ರಾಜೀವ್ ಗಾಂಧಿ ಅವರು ನೀಡಿದ ಕೊಡುಗೆ ಆಪಾರವಾಗಿದೆ. ಶಿಕ್ಷಣ, ಕೈಗಾರಿಕೆ ಕ್ಷೇತ್ರಗಳ ಬೆಳವಣಿಗಾಗಿ ವಿಶೇಷ ಅಸಕ್ತಿಯನ್ನು ಹೊಂದಿ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾದ ಮಹಾನ್ ಚೇತನ ರಾಜೀವ್‍ಗಾಂಧಿ ಅವರನ್ನು ನೆನಪು ಮಾಡಿಕೊಳ್ಳುವ ಜೊತೆಗೆ ದೇಶÀಕ್ಕೆ ಗಾಂಧಿ ಕುಟುಂಬ ನೀಡಿದ ಕೊಡುಗೆಯ ಬಗ್ಗೆ ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಯವಕರಿಗೆ ಸ್ಪೂರ್ತಿ ತುಂಬಿ, ಯುವ ರಾಜಕಾರಣಿಗಳನ್ನು ಸದಾ ಬೆನ್ನು ತಟ್ಟುತ್ತಿದ್ದವರು ರಾಜೀವ್‍ಗಾಂಧಿ ಅವರು. ದೇಶದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಎಂದು ಭಾವಿಸಿ ಅಂದೇ 21 ವರ್ಷಕ್ಕಿಂತ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಕೆ ಮಾಡಿ, ಯುವಕರು ಸಕ್ರಿಯವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಇಂಥ ಚಿಂತನಾ ಶೀಲ ರಾಜಕಾರಣಿ ರಾಜೀವ್‍ಗಾಂಧಿ ಉಗ್ರಗಾಮಿಗಳ ಗುಂಡಿಗೆ ಬಲಿಯಾದದ್ದು ದುರ್ದೈವ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ತಾ.ಪಂ. ಮಾಜಿ ಸದಸ್ಯರಾದ ಕಾಗಲವಾಡಿ ಶಿವಸ್ವಾಮಿ, ಮುಖಂಡರಾದ ಶಂಭಪ್ಪ, ಶಿವಮೂರ್ತಿ, ಎಎಚ್‍ಎನ್ ನಸ್ರುಲ್‍ಖಾನ್, ಆಯೂಬ್ ಖಾನ್, ಜಿ.ಪಂ. ಮಾಜಿ ಸದಸ್ಯೆ ಕಾವೇರಿ ಶಿವಕುಮಾರ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ, ರಾಚಶೆಟ್ಟಿ, ಮಾಜಿ ನಗರಸಭಾ ಸದಸ್ಯರಾದ ಕೆಂಪರಾಜು, ಮಲ್ಲು, ಪುಟ್ಟಸ್ವಾಮಿ, ಪಿ. ಶೇಖರ್, ಚೆನ್ನಿಪುರಮೋಳೆ ಚಂದ್ರು ಮೊದಲಾದವರು ಇದ್ದರು.