ಪಂಚಾಯತ್ ರಾಜ್ ಇಲಾಖೆ ಆಯುಕ್ತ ಭೇಟಿ, ಮುತ್ತಿಗೆ

ಅರಕೇರಾ,ಜೂ.೧೫- ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಾದ ಪ್ರಕರಣದ ಹಿನ್ನಲೆ ಗ್ರಾಮಕ್ಕೆ ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕ ಮೇರಿ ಗುರುವಾರ ಭೇಟಿ ನೀಡಿದರು. ಕುಡಿಯುವ ನೀರಿನ ಓವರ್ ಟ್ಯಾಂಕ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಪರಿಶೀಲನೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಭೇಟಿ ನೀಡಿದ್ದೇವೆ. ಕೋವಿಡ್ ಸಮಯದಲ್ಲಿ ಯಾವ ರೀತಿ ಕಾರ್ಯಪಡೆ ಕೆಲಸ ಮಾಡಲಾಗಿತ್ತು, ಅದೇ ರೀತಿ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಿರಂತರವಾಗಿ ಕೆಲಸ ಮಾಡಬೇಕು. ಜನರಿಗೆ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರಿನ್ನು ಸೇವಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಲ್ಲಿನ ಅಂಗವಾಡಿ ಹಾಗೂ ಆಶಾ ಕಾರ್ಯಕರ್ತರು ಮತ್ತು ವಾಟರ್ ಮ್ಯಾನ್‌ಗಳಿಗೆ ಇಲಾಖೆ ಹೆಚ್ಚಿನ ತರಬೇತಿ ನೀಡುತ್ತದೆ ಎಂದರು.
ಕಲುಷಿತ ನೀರಿನ ಪ್ರಕರಣಗಳು ಮರುಕಳಿಸದಂತೆ ಅಧಿಕಾರಿಗಳು ನಿಗಾವಹಿಸಿ ಜವಬ್ದಾರಿಯಿಂದ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ನಿರ್ಲಕ್ಷ್ಯ ವಹಿಸಿದ್ದಲ್ಲಿ ಸೂಕ್ತ ಕ್ರಮ ಜರುಗಿಸಿವುದಾಗಿ ಎಚ್ಚರಿಕೆ ನೀಡಲಾಗಿದೆ. ಗ್ರಾಮದಲ್ಲಿ ಸಮರ್ಪಕವಾಗಿ ಜನರಿಗೆ ಕುಡಿಯುವ ನೀರನ್ನು ಪೂರೈಕೆ ಮಾಡಲು ಹೊಸದಾಗಿ ಪೈಪ್ ಲೈನ್ ಮಾಡಲಾಗಿದೆ. ಸ್ಥಗಿತಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಲಾಗಿದೆ ಗ್ರಾಮಸ್ಥರು ಶುದ್ಧ ನೀರನ್ನು ಕುಡಿಯುವಂತೆ ಇಲಾಖೆಯ ವತಿಯಿಂದ ಜಾಗೃತಿ ಮೂಡಿಸಲಾಗಿದೆ ಎಂದರು.
ಜಿಪಂ ಸಿಇಒ ಶಶಿಧರ ಕುರೇರ, ಇಇ ವೆಂಕಟೇಶ ಗಲಗ, ಡಿಎಚ್‌ಒ ಡಾ.ಸುರೇಂದ್ರ ಬಾಬು, ತಾ.ಪಂ ಇಒ ಪಂಪಾಪತಿ ಹಿರೇಮಠ ಇತರರಿದ್ದರು.
ಆಯುಕ್ತರ ಕಾರಿಗೆ ಮುತ್ತಿಗೆ :
ರೇಕಲಮರಡಿ ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯತಿಯಲ್ಲಿ ಆಯುಕ್ತೆ ಪ್ರಿಯಾಂಕ ಮೇರಿ ಅಧಿಕಾರಿಗಳ ಸಭೆ ನಡೆಸಿದರು. ನಂತರ ಹಿಂದಿರುಗುವಾಗ ಆಯುಕ್ತರ ಕಾರಿಗೆ ಗ್ರಾಪಂ ಕಚೇರಿ ಮುಂದೆ ಮಹಿಳೆಯರು ಮುತ್ತಿಗೆ ಹಾಕಿದ ಪ್ರಸಂಗ ನಡೆಯಿತು. ಆಲದಮರ ತಾಂಡದಲ್ಲಿ ೧ ವರ್ಷದಿಂದ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದೆ. ಶುದ್ಧ ಕುಡಿವ ನೀರಿನ ಘಟಕ ದುರಸ್ತಗೊಳಿಸಿ ಎಂದು ತಾಂಡಾದ ೩೦ಕ್ಕೂ ಹೆಚ್ಚು ಮಹಿಳೆಯರು ಆಯುಕ್ತರ ಕಾರಿಗೆ ಮುತ್ತಿಗೆ ಹಾಕಿದರು. ಮಹಿಳಾ ಅಧಿಕಾರಿಯಾಗಿ ಮಹಿಳೆಯರ ಸಮಸ್ಯೆಯನ್ನು ಸೌಜನ್ಯಕ್ಕಾದರು ಆಲಿಸದೆ ಆಯುಕ್ತರು ಅಲ್ಲಿಂದ ತೆರಳಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಅಗ್ರಹಾರ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಆಲದಮರ ತಾಂಡದಲ್ಲಿ ಸ್ಥಗಿತಗೊಂಡ ಶುದ್ಧಕುಡಿವ ನೀರಿನ ಘಟಕ ವೀಕ್ಷಣೆ ಮಾಡಿ ಪರಿಶೀಲಿಸಿ, ತಾಂತ್ರಿಕ ದೋಷಗಳನ್ನು ಸರಿಪಡಿಸಿ ಇಲ್ಲಿನ ನಿವಾಸಿಗರಿಗೆ ಶುದ್ಧಕುಡಿವ ನೀರು ಪೂರೈಕೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾಟಾಚಾರದ ಭೇಟಿ :
ರೇಕಲಮರಡಿ ಗ್ರಾಮಕ್ಕೆ ಪಂಚಾಯತ್ ರಾಜ್ ಇಲಾಖೆಯ ಆಯುಕ್ತ ಭೇಟಿ ಕಾಟಾಚಾರವೆಂಬಂತೆ ಬಿಂಬಿತವಾಗಿತ್ತು, ಜಾಡಲದಿನ್ನಿ ಗ್ರಾಮ ಪಂಚಾಯತಿಯಲ್ಲಿ ಮಾಧ್ಯಮದವರನ್ನು ಹೊರಗಿಟ್ಟು ಬಾಗಿಲು ಹಾಕಿ ಅಧಿಕಾರಿಗಳ ಸಭೆ ನಡೆಸಿದ ಪ್ರಸಂಗ ನಡೆಯಿತು. ಮಾಧ್ಯಮದವರ ಪ್ರಶ್ನೆಗೆ ನಿರಾಸದಾಯಕ ಉತ್ತರ ನೀಡಿದ್ದಕ್ಕಾಗಿ ಸಾರ್ವಜನಿಕರ ಚರ್ಚೆಗೆ ಗ್ರಾಸವಾಯಿತು.