ಪಂಚಾಯತ್ ಫಲಿತಾಂಶದಲ್ಲಿ ಬಿಜೆಪಿ ಮುಂದೆ : ಮತದಾರರಿಗೆ ಅಭಿನಂದನೆ

ಲಿಂಗಸುಗೂರು.ಜ.೦೧-ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶದಲ್ಲಿ ಲಿಂಗಸುಗೂರು ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಮುಂದೆ ಇದ್ದು, ಸಹಕರಿಸಿ ಆಶೀರ್ವದಿಸಿದ ಮತದಾರರಿಗೆ ಹಟ್ಟಿ ಚಿನ್ನದ ಗಣಿ ಅದ್ಯಕ್ಷ ಹಾಗೂ ಮಾಜಿ ಶಾಸಕ ಮಾನಪ್ಪ ವಜ್ಜಲ್ ಅಭಿನಂದನೆ ಸಲ್ಲಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೆ ಇದು ಬುನಾದಿ ಹಾಕಿದಂತಾಗಿದೆ. ಲಿಂಗಸುಗೂರು ಕ್ಷೇತ್ರದಲ್ಲಿ ಸುಮಾರು ೨೦ಕ್ಕೂ ಹೆಚ್ಚಿನ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರದ ಜನಪರ ಕಾರ್ಯಗಳು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಿದೆ. ಅಲ್ಲದೇ, ಕಳೆದ ಎರಡು ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸಲ್ಲಿಸಿದ ನಮ್ಮ ಸೇವೆಯನ್ನೂ ಮತದಾರರು ಪರಿಗಣಿಸಿರುವುದು ಅಭಿನಂದನಾರ್ಹ. ಸುಮಾರು ೨೦ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವುದು ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಗಟ್ಟಿಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ನಮ್ಮ ಪಕ್ಷ ಬೆಂಬಲಿಸಿದ್ದ ಅಭ್ಯರ್ಥಿಗಳ ಬೆನ್ನಿಗೆ ನಿಂತು ಆಶೀರ್ವದಿಸಿದ ಮತದಾರರ ಪ್ರಭುಗಳಿಗೆ ಚಿರರುಣಿಯಾಗಿದ್ದೇವೆ. ಬರುವ ದಿನಗಳಲ್ಲಿ ಪಂಚಾಯತ್‌ಗಳ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುವ ಮೂಲಕ ಮಾದರಿ ಆಡಳಿತಕ್ಕೆ ನಾಂದಿ ಹಾಡಲಾಗುವುದೆಂದು ವಜ್ಜಲ್ ಹೇಳಿದರು.