ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಇಷ್ಟಲಿಂಗ ಮಹಾಪೂಜಾರಂಭ

ಬೀದರ್:ಜು.25: ಬೀದರ್-ಭಾಲ್ಕಿ ರಸ್ತೆಯಲ್ಲಿರುವ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರಂಭಾಪುರಿ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ ಆರಂಭವಾಯಿತು.

ಬೀದರ್ ಜಿಲ್ಲೆಯಲ್ಲಿ ಬರೊಬ್ಬರಿ 24 ವರ್ಷಗಳ ಬಳಿಕ ಮತ್ತೆ ಈ ಅದ್ಭುತ ರುದ್ರಾಭಿಷೆಕದೊಂದಿಗೆ ಇಷ್ಟಲಿಂಗ ಮಹಾಪೂಜೆ ನೆರವೇರುತ್ತಿರುವುದು ಐತಿಹಾಸಿಕ ಸಂಗತಿ.

ಅಧಿಕ ಮಾಸ ಪ್ರಯುಕ್ತ ಇಲ್ಲಿಯ ಜಗದ್ಗುರು ರೇಣುಕಾಚಾರ್ಯ ಮಂದಿರದ ಉದ್ಘಾಟನೆ ಕಾರ್ಯಕ್ರಮ ಸಹ ಜರುಗುತ್ತಿದೆ.

ಪುಣ್ಯಾಶ್ರಮದ ಹಲವಾರು ಭಕ್ತರು ಈ ಐತಿಹಾಸಿಕ ಕ್ಷಣಗಳನ್ನು ನೋಡಿ ಕಣ್ತುಂಬಿಕೊಂಡರು.

ಇದೇ ವೇಳೆ ಶ್ರೀ ರೇಣುಕ ಮಹೇಶ್ವರ ಸೌಹಾರ್ದ ಪತ್ತಿನ ಸಹಕಾರ ಸಂಘದ ವತಿಯಿಂದ ಸುಮಾರು 100ಕ್ಕೂ ಅಧಿಕ ಜಂಗಮರ ಮಕ್ಕಳಿಗೆ ಅಯ್ಯಾಚಾರ ಕಾರ್ಯಕ್ರಮ ಜರುಗಿತು. ಮಕ್ಕಳಿಗೆ ಎಣ್ಣೆ ಎರೆದು, ಮಂತ್ರೋಪದೇಶವನ್ನು ಮಾಡುವ ಮೂಲಕ ಹುಡಗಿಯ ಪೂಜ್ಯ ಷಡಕ್ಷರಿ ಶಿವಾಚಾರ್ಯರು ಹಾಗೂ ತಮಲೂರದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ನೂರು ಜನ ಜಂಗಮ ವಟುಗಳಿಗೆ ಭೋದಿಸಿದರು. ತಡೋಳಾ ಹಾಗೂ ಮೇಹಕರ ಶ್ರೀಮಠದ ಪೂಜ್ಯ ರಾಜೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು.

ರಂಭಾಪುರಿ ಪೀಠದ ಪುರೋಹಿತರು ಹಾಗೂ ಬಸವರಾಜ ಸ್ವಾಮಿ ಚಿಟ್ಟಾ ಹಾಗೂ ತಂಡದವರು ಮಹಾ ರುದ್ರಾಭಿಷಕ ನಡೆಸಿಕೊಟ್ಟರು. ನಂತರ ಸಹಸ್ರ ಬಿಲ್ವಾರ್ಚನೆ ತದನಂತರ ಮಹಾ ಮಂಗಳಾರತಿ ಜರುಗಿತು.

ಈ ಸಂದರ್ಭದಲ್ಲಿ ಪುಣ್ಯಾಶ್ರಮದ ಪ್ರಮುಖರಾದ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ, ಶ್ರೀಕಾಂತ ಸ್ವಾಮಿ ಸೋಲಪುರ, ಕಾರ್ತಿಕ ಮಠಪತಿ, ಓಂಕಾರ ಸ್ವಾಮಿ, ಬಸವರಾಜ ಸ್ವಾಮಿ ಎಕಲಾರ, ಡಾ.ಪ್ರಭುಲಿಂಗ ಸ್ವಾಮಿ, ಮರುಳಾರಾಧ್ಯಾ ಚಿಟ್ಟಾ, ಸಂತೋಷ ಖಜುರಿ ಸೇರಿದಂತೆ ಸಾವಿರಾರು ಪುಣ್ಯಾಶ್ರಮದ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.