ಪಂಚಾಚಾರ್ಯರ ಸಂದೇಶ ತತ್ವಾದರ್ಶಗಳು ಸಾರ್ವಕಾಲಿಕ: ಈಶ್ವರ ಖಂಡ್ರೆ

ಬೀದರ್: ಜು.20:ವೀರಶೈವ ಧರ್ಮ ಸ್ಥಾಪಕರಾದ ಶ್ರೀ ಜಗದ್ಗುರು ಪಂಚಾಚಾರ್ಯರ ಸಂದೇಶ ಸಾರ್ವಕಾಲಿಕವಾಗಿವೆ. ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರು ಹಾಗೂ ಭಾಲ್ಕಿ ಶಾಸಕರಾದ ಶ್ರೀ ಈಶ್ವರ ಖಂಡ್ರೆಯವರು ಬಣ್ಣಿಸಿದರು. ಅವರು ತಾಲೂಕಿನ ಧನ್ನೂರು (ಹೆಚ್) ಗ್ರಾಮದಲ್ಲಿ ವೀರಶೈವ ರಕ್ಷಣಾ ವೇದಿಕೆ ಮತ್ತು ಶಾಂಭವಿ ಆಧ್ಯಾತ್ಮ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಶ್ರೀ ಜಗದ್ಗುರು ರೇಣುಕಾಚಾರ್ಯ ವೃತ್ತದ ಭೂಮಿ ಪೂಜಾ ಮತ್ತು ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀ ರೇಣುಕಾದಿ ಪಂಚಾಚಾರ್ಯರು ಕೇವಲ ವೀರಶೈವ ಲಿಂಗಾಯತರಿಗಷ್ಟೇ ಅಲ್ಲ ಸಮಾಜದ ಎಲ್ಲಾವರ್ಗದ ಜನರ ಕಲ್ಯಾಣಗೈದ ಮಹಾಪುರುಷರಾಗಿದ್ದಾರೆ. ಅವರ ತತ್ವಾದರ್ಶಗಳು ಎಲ್ಲಾ ಕಾಲಕ್ಕೂ ವ್ಯಾಪ್ತವಾಗಿದ್ದು ಅವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದು ಧನ್ನೂರಿನಲ್ಲಿ ಎಲ್ಲ ಯುವಕರು ಸೇರಿಕೊಂಡು ಶ್ರೀ ಜಗದ್ಗುರು ರೇಣುಕಾಚಾರ್ಯರ ವೃತ್ತ ಮಾಡುತ್ತಿರುವುದು ಶಾಘನೀಯ ಕಾರ್ಯವಾಗಿದೆ. ಇದು ನಮ್ಮ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಪ್ರಯತ್ನವಾಗಿರಬಹುದು. ಈ ಎಲ್ಲಾ ಯುವಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ದೇಶಕ್ಕಾಗಿ, ಧರ್ಮಕ್ಕಾಗಿ ದುಡಿಯಲು ಮುಂದೆ ಬರಬೇಕು ಎಂದು ಹೇಳಿದ ಶ್ರೀ ಈಶ್ವರ ಖಂಡ್ರೆಯವರು ನಮ್ಮ ಜಿಲ್ಲೆಯ ಹೆಮ್ಮೆಯಾಗಿರುವ ‘ಮಹಾತಪಸ್ವಿ’ ತಪೋರತ್ನ ಪೂಜ್ಯ ಶ್ರೀ ಕರುಣಾದೇವಿ ಮಾತಾರವರು ಶ್ರೀ ಶೈಲದಲ್ಲಿ ನಿರ್ಮಿಸುತ್ತಿರುವ ಶ್ರೀ ಅಕ್ಕಮಹಾದೇವಿ ಚೈತನ್ಯ ಕೇಂದ್ರದಲ್ಲಿ ನಮ್ಮ ತಾಯಿಯವರಾದ ಲಿಂ, ಶ್ರೀಮತಿ ಲಕ್ಷ್ಮೀಬಾಯಿ ಖಂಡ್ರೆಯವರ ಸಂಸ್ಮರಣಾರ್ಥವಾಗಿ ಒಂದು ಸೋಟ್‍ನ್ನು ನಿರ್ಮಿಸುವುದಾಗಿ ವಾಗ್ದಾನ ಘೋಷಣೆ ಮಾಡಿದರು.

ಸಮಾರಂಭದ ನೇತೃತ್ವವನ್ನು ವಹಿಸಿದ ಬೇಮಳಖೇಡ ಹಿರೇಮಠ ಸಂಸ್ಥಾನದ ಪಟ್ಟಾಧ್ಯಕ್ಷರಾದ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು ಮಾತನಾಡಿ ಶ್ರೀ ಜಗದ್ಗುರು ಪಂಚಾಚಾರ್ಯರ ಗುರು ಪರಂಪರೆ ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗ ಹೀಗೆ ಯುಗ ಯುಗಗಳಿಂದ ಅಕ್ಷಯವಾಗಿ ಬೆಳೆದುಕೊಂಡು ಬರುತ್ತಿದ್ದು. ಸುಮಾರು ಐದು ಸಾವಿರ ವರ್ಷಗಳ ಚಾರಿತ್ರಿಕ ದಾಖಲೆಯನ್ನು ಹೊಂದಿದೆ. ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ವೀರಶೈವ ಧರ್ಮ ದಿವ್ಯ ಸಂದೇಶವನ್ನು ನೀಡಿದ್ದು ಸ್ವಧರ್ಮನಿಷ್ಠೆ ಪರಧರ್ಮ ಸಹಿಷ್ಣತೆ ವೀರಶೈವದ ತತ್ವ ಜೀವಾಳವಾಗಿದ್ದು, ಪ್ರತಿಯೊಬ್ಬರು ಅದನ್ನು ಪಾಲಿಸಿಕೊಂಡು ಬಂದಲ್ಲಿ ಜೀವನ ಸಾರ್ಥಕವಾಗುತ್ತದೆ. ನಾವು ಹುಟ್ಟು ಹಾಕಿದ ಧನ್ನೂರಿನ ವೀರಶೈವ ರಕ್ಷಣಾ ವೇದಿಕೆ ಮತ್ತು ಶಾಂಭವಿ ಆಧ್ಯಾತ್ಮ ವೇದಿಕೆ ಇಂದು ವ್ಯಾಪಕವಾಗಿ ಬೆಳೆದು ಸಮಾಜ ಮುಖಿಯಾಗಿ ಕಾರ್ಯಮಾಡುತ್ತಿರುವುದು ಹೆಮ್ಮೆ ಮತ್ತು ತೃಪ್ತಿಯನ್ನು ತಂದಿದೆ. ಇಂದು ಇಲ್ಲಿ ರೇಣುಕಾಚಾಚಾರ್ಯರ ವೃತ್ತವನ್ನು ಮಾಡುತ್ತಿರುವುದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮೊಟ್ಟ ಮೊದಲ ಸರ್ಕಲ್ ಆಗಿದೆ ಎಂದರು. ಶ್ರೀಗಳು ಅಭಿಮಾನದಿಂದ ನುಡಿದರು.

ಗುರುವಂದನಾ: ಇದೇ ಸಂದರ್ಭದಲ್ಲಿ ಮಳೆಯ ಕಾರಣಕ್ಕಾಗಿ ಮುಂದೂಡಲಾಗಿದ್ದ ಪೂಜ್ಯ ಕರುಣಾದೇವಿ ಮಾತಾರವರ ಗುರು ವಂದನಾ ಕಾರ್ಯಕ್ರಮ ಇಂದು ಅದ್ದೂರಿಯಾಗಿ ಭಕ್ತರು ನೆರವೇರಿಸಿದರು. ಶ್ರೀ ಈಶ್ವರ ಖಂಡ್ರೆ ಮತ್ತು ಎರಡೂ ಸಂಸ್ಥೆಯ ಸದಸ್ಯರು ಶ್ರೀ ಮಾತಾರವರಿಗೆ ರುದ್ರಾಕ್ಷಿ ಕಿರೀಟ ಧಾರಣ ಮಾಡಿದರಲ್ಲದೇ ಪುಷ್ಪಾರ್ಚನೆಯನ್ನು ಮಾಡಿ ಗುರು ಭಕ್ತಿ ಸಮರ್ಪಿಸಿದರು. ದಿವ್ಯ ಸಾನಿಧ್ಯವನ್ನು ವಹಿಸಿ ಶ್ರೀ ಮಾತಾರವರು ಎಲ್ಲರನ್ನೂ ಹರಸಿದರು.

ಗ್ರಾಮ ಪಂಚಾಯತ ಅಧ್ಯಕ್ಷರಾದ ಪರಮೇಶ್ವರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಲೂಕ ಕಾಂಗ್ರೇಸ ಅಧ್ಯಕ್ಷ ಹಣಮಂತರಾವ ಚವ್ಹಾಣ, ಡಾ|| ಸುಭಾಷ ಪಾಟೀಲ, ಡಾ|| ಓಂಕಾರ ಸ್ವಾಮಿ, ಗುಂಡೇರಾವ ಪಾಟೀಲ ಬಾಬುರಾವ ಪಾಟೀಲ, ಶ್ರೀಮತಿ ಮಹಾದೇವಿ ಮಠಪತಿ ಮುಂತಾದವರು ಅತಿಥಿಗಳಾಗಿದ್ದರು.

ರಮೇಶ ಅರಳಿ ಸ್ವಾಗತ ಕೋರಿದರು, ಬಸವರಾಜ ಹಾಲಹಳ್ಳಿ ನಿರೂಪಿಸಿದರು ಉಮಾಕಾಂತ ಜೇಮಶೆಟ್ಟಿ ವಂದಿಸಿದರು, ಶಿವಕುಮಾರ ಪಾಂಚಾಳ ಸಂಗೀತ ಸೇವೆ ನೆರವೇರಿಸಿದರು.

ಪುರಸ್ಕಾರ: ಇದೆ ಸಂದರ್ಭದಲ್ಲಿ UPSಅ ಪರೀಕ್ಷೆಯಲ್ಲಿ ಉತ್ತೀರ್ಣರಾದ ತಾಲೂಕಿನ ಅ ಅನುರಾಗ ದರು ಮದಕಟ್ಟಿಯವರಿಗೆ ವಿಶೇಷ ಸನ್ಮಾನ ನಡೆಯಿತು ಆನಂತರ ಗ್ರಾಮದ S.S.ಐ.ಅ ಮತ್ತು P.U.ಅ ಯಲ್ಲಿ ಗರಿಷ್ಟ ಅಂಕಗಳಿಸಿದ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತ್ತು. ಸಾವಿರಾರೂ ಸಂಖ್ಯೆಯಲ್ಲಿ ಭಕ್ತರು ಗ್ರಾಮಸ್ಥರು ಸಮಾರಂಭದಲ್ಲಿ ಇದ್ದರು.