ಪಂಚಲಿಂಗೇಶ್ವರ, ಬಿಳಿಗುದಿರೇಶ್ವರ, ಮರಿಗುದಿರೇಶ್ವರ ಪಲ್ಲಕ್ಕಿ ಉತ್ಸವ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ನ.15: ತಾಲ್ಲೂಕಿನ ಗೋಸಬಾಳು ಗ್ರಾಮದಲ್ಲಿ ಕುರುಬರ ಆರಾಧ್ಯ ದೈವ  ಪಂಚಲಿಂಗೇಶ್ವರ, ಬಿಳಿಗುದಿರೇಶ್ವರ, ಮರಿಗುದಿರೇಶ್ವರ ದೇವರ ಉತ್ಸವ  ಭಕ್ತಿಭಾವದೊಂದಿಗೆ ಸಡಗರ ಸಂಭ್ರಮದಿಂದ ನಡೆಯಿತು.
ಹಬ್ಬದಂದು ಬ್ರಾಹ್ಮೀ ಮುಹೂರ್ತದಲ್ಲಿ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವದ ಮೂಲಕ ವೇದಾವತಿ ಹಗರಿ ನದಿಗೆ ತೆರಳಿ, ಗಂಗಾ ಪೂಜೆ ನೆರೆವೇರಿಸಿ, ಕಂಬಳಿ ಗದ್ದುಗೆ ಹಾಕಿ ದೇವರನ್ನು ಸ್ಥಾಪಿಸಿದರು.
ಛತ್ರ, ಚಾಮರಗಳಿಂದ ಅಲಂಕರಿಸಿ ವಿಶೇಷ ಪೂಜೆ ನಂತರ ಗ್ರಾಮದ ಹಾಲುಮತ ಬಾಂಧವರು ಕಾಯಿ ಕರ್ಪೂರ, ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ದೇವರ ಉತ್ಸವಕ್ಕೆ ಬಂದ ಭಕ್ತರಿಗೆ ಗ್ರಾಮದ ಭಕ್ತರಿಂದ ಅನ್ನ ಪ್ರಸಾದ ವ್ಯೆವಸ್ಥೆಯನ್ನು ಮಾಡಲಾಗಿತ್ತು.
ದೀಪಾವಳಿ ಹಬ್ಬದಂದು ಅಲಂಕೃತ ಮಂಟಪದಲ್ಲಿ  ಪಂಚಲಿಂಗೇಶ್ವರ, ಬಿಳಿಗುದಿರೇಶ್ವರ, ಮರಿಗುದಿರೇಶ್ವರ ಪ್ರತಿಷ್ಟಾಪಿಸಿ ಪೂಜಿಸಿ, ಕಡಬು, ಕರ್ಜಿಕಾಯಿ, ಉತ್ತುತ್ತಿ, ಕೊಬ್ಬರಿ ಬಟ್ಟಲು, ವೀಳೆದಲೆ, ಅಡಿಕೆ ಅರಿಷಣಕೊಂಬು ಸಮೇತ ನೋಪಿ ನೂಲಿ ಪೂಜಿಸಿ, ಹರಕೆಯ ಭಕ್ತರು ಬಲಗೈಗೆ ಕಟ್ಟಿಸಿಕೊಂಡರು. ಮಂಗಳವಾರ ಸಂಜೆ ಮೂರ್ತಿಗಳಿಗೆ ಸುಮಂಗಳಿಯರು ಆರತಿಗೈದು, ಸಕಲ ವಾದ್ಯ, ಭಜನಾ ತಂಡದ ಮೆರವಣಿಗೆ ನಡೆಸಿದರು.
ಪಾಡ್ಯದ ಮರುದಿನ ಅಂದರೆ ಇಂದು ರಾತ್ರಿ ಪಟ್ಟದ ಪೂಜಾರಿಯಿಂದ ಬತ್ತಿ ನುಂಗುವ (ಬೆಂಕಿ) ಕಾರ್ಯಕ್ರಮ, ಮುಳ್ಳಿನ ಹಲಗೆ ಮೇಲೆ ನಿಲ್ಲುವುದು, ಕತ್ತಿಯ ಅಲಗನ್ನು ಮೈ ಮೇಲೆ ಹೊಡೆದುಕೊಳ್ಳವ ಪವಾಡ ಕಾರ್ಯಕ್ರಮ ಜರುಗುತ್ತದೆ ಎಂದು ಗ್ರಾಮಸ್ಥ ಎಚ್. ಮಂಜುನಾಥ ತಿಳಿಸಿದರು.
ಗುರುವಿನ ರೇವಣಸಿದ್ಧ, ಪಟ್ಟದ ಪೂಜಾರಿ ಗೋವಿಂದಪ್ಪ ಮರಿಸ್ವಾಮಿ, ಕಾರಮಂಚಪ್ಪ, ಸೋಮಲಿಂಗ ಜಿ, ಕೆ ಸಿದ್ಧಪ್ಪ, ಕೆ ಅಯ್ಯಣ್ಣ, ಗೋವಿಂದಪ್ಪ  ಸೇರಿದಂತೆ ಕರೂರು, ಮೈಲಾಪುರ, ಬಲಕುಂದಿ, ಸೀಮಾಂಧ್ರದ ಗುಳ್ಳಂ, ಉಣೇನೂರು, ಎಮ್ಮಿಗನೂರು ಗ್ರಾಮಗಳ ಅಪಾರ ಸಂಖ್ಯೆಯ ಭಕ್ತಾದಿಗಳು ಇದ್ದರು.