ಪಂಚರಾಜ್ಯಗಳ ಚುನಾವಣೆ ಅಭ್ಯರ್ಥಿಗಳ ಭವಿಷ್ಯಕ್ಕೆ ಮುದ್ರೆ

ನವದೆಹಲಿ, ಏ. ೬- ತೀವ್ರ ಜಿದ್ದಾಜಿದ್ದಿಯಿಂದ ಕೂಡಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗೆ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆದಿದ್ದು, ಸುಮಾರು ೨೦ ಕೋಟಿ ಮತದಾರರು ತಮ್ಮನ್ನು ಪ್ರತಿನಿಧಿಸುವ ಅಭ್ಯರ್ಥಿಯ ರಾಜಕೀಯ ಭವಿಷ್ಯಕ್ಕೆ ಮುದ್ರೆ ಒತ್ತಿದ್ದಾರೆ.
ತಮಿಳುನಾಡಿನ ೨೩೪ ಕ್ಷೇತ್ರಗಳು, ಕೇರಳದ ೧೪೦, ಕೇಂದ್ರಾಡಳಿತ ಪ್ರದೇಶ ಪುದುಚೆರಿಯ ೩೦ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ.
ಪಶ್ಚಿಮ ಬಂಗಾಳದ ೩೧ ಹಾಗೂ ಅಸ್ಸಾಂನ ೪೦ ಕ್ಷೇತ್ರಗಳಿಗೆ ೩ನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿದೆ.
ಮಧ್ಯಾಹ್ನದ ವೇಳೆಗೆ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಸರಿಸುಮಾರು ೪೦ ರಿಂದ ೪೫ ರಷ್ಟು ಮತದಾನವಾಗಿದೆ.
ತಮಿಳುನಾಡಿನ ೨೩೪ ಕ್ಷೇತ್ರಗಳಿಗೆ ಮತದಾನ ಬಿರುಸಿನಿಂದ ಸಾಗಿದ್ದು ಆಡಳಿತಾರೂಢ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ಅಧಿಕಾರ ಹಿಡಿಯಲು ಭಾರೀ ಪೈಪೋಟಿ ನಡೆದಿದೆ. ಒಂದೇ ಹಂತದಲ್ಲಿ ನಡೆಯಲಿರುವ ಮತದಾನದಲ್ಲಿ ಎಐಎಡಿಎಂಕೆ ೧೯೧ ಕ್ಷೇತ್ರಗಳು ಅದರ ಮಿತ್ರ ಪಕ್ಷವಾದ ಬಿಜೆಪಿ ೨೦, ಪಿಎಂಕೆ ೨೩ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ.
ಡಿಎಂಕೆ ೧೮೮ ಕ್ಷೇತ್ರಗಳು ಮತ್ತು ಕಾಂಗ್ರೆಸ್ ೨೫ ಹಾಗೂ ಇತರೆ ಸಣ್ಣಪುಟ್ಟ ಪಕ್ಷಗಳು ಇನ್ನಿತರೆ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿವೆ. ಕಮಲ್ ಹಾಸನ್ ಅವರ ಎಂಎನ್‌ಎಂ ೧೪೨ ಕ್ಷೇತ್ರ ಟಿಟಿವಿ ದಿನಕರ್ ಅವರ ಎಎಂಎಂಕೆ ೧೬೫ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ.
ಕೇರಳದಲ್ಲಿ ೧೪೦ ಕ್ಷೇತ್ರಗಳ ಪೈಕಿ ಆಡಳಿತಾರೂಢ ಸಿಪಿಎಂ ೭೭ ಮಿತ್ರ ಪಕ್ಷ ಸಿಪಿಐ ೨೧ ಜೆಡಿಎಸ್ ೪ ಶರದ್ ಪವಾರ್ ನೇತೃತ್ವದ ಎನ್ ಸಿಪಿ ೩ ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಸ್ಪರ್ಧೆ ಮಾಡಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮಿತ್ರಕೂಟದಲ್ಲಿ ಕಾಂಗ್ರೆಸ್ ೯೩, ಐಯುಎಂಎಲ್ ೨೫, ಕೇರಳ ಕಾಂಗ್ರೆಸ್ ೧೦ ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ ೧೧೩ ಕ್ಷೇತ್ರಗಳಲ್ಲಿ ಮತ್ತು ಬಿಡಿಜೆಸ್೨೧ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ.
ಕೇಂದ್ರಾಡಳಿತ ಪ್ರದೇಶ ಪದುಚೆರಿಯ ೩೦ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ ೧೪, ಡಿಎಂಕೆ ೧೩ ಇತರೆ ಮಿತ್ರ ಪಕ್ಷ ಇನ್ನುಳಿದ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಬಿಜೆಪಿ ೯ ಕ್ಷೇತ್ರ ಹಾಗೂ ಎಐಎಡಿಎಂಕೆ ೧೬ ಹಾಗೂ ಇನ್ನುಳಿದ ಕ್ಷೇತ್ರಗಳಲ್ಲಿ ಇತರ ಪಕ್ಷಗಳು ಕಣದಲ್ಲಿವೆ.
ಪಶ್ಚಿಮ ಬಂಗಾಳದ ೩೧ ಕ್ಷೇತ್ರ ಹಾಗೂ ಅಸ್ಸಾಂನ ೪೦ ಕ್ಷೇತ್ರಗಳಿಗೂ ಮತದಾನ ಬಿರುಸುಗೊಂಡಿದೆ.
ಪಶ್ಚಿಮ ಬಂಗಾಳದಲ್ಲಿ ಬಾಕಿ ಇರುವ ಇನ್ನೂ ಐದು ಹಂತದ ಮತದಾನ ಸೇರಿದಂತೆ, ಈ ಎಲ್ಲಾ ರಾಜ್ಯಗಳ ಮತ ಎಣಿಕೆ ಮೇ ತಿಂಗಳ ೨ ರಂದು ನಡೆಯಲಿದೆ. ಅಂದು ಮತದಾರನ ಒಲವು ಯಾರ ಕಡೆಗೆ ಇದೆ ಎನ್ನುವುದು ಸ್ಪಷ್ಟವಾಗಲಿದೆ.
ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಚುನಾವಣಾ ಆಯೋಗ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಕೈಗೊಳ್ಳಲಾಗಿದೆ. ಈ ಮೂರು ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯುತ್ತಿದೆ.
ತಮಿಳುನಾಡಿನಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ೨೩೪ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ೩,೯೯೮ ಅಭ್ಯರ್ಥಿಗಳ ಹಣೆಬರಹವನ್ನು ೬.೨ ಕೋಟಿ ಮತದಾರರು ನಿರ್ಧರಿಸಲಿದ್ದಾರೆ.
ಎಐಎಡಿಎಂಕೆ ಜತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ತಮಿಳುನಾಡಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಈ ಬಾರಿಯ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಅಸ್ತಿತ್ವ ಕಂಡುಕೊಳ್ಳುವ ಬಗ್ಗೆ ಕುತೂಹಲ ಮೂಡಿಸಿದೆ.
ಮತ್ತೊಂದೆಡೆ ೧೦ ವರ್ಷಗಳಿಂದ ಅಧಿಕಾರದಿಂದ ವಂಚಿತರಾಗಿರುವ ಡಿಎಂಕೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸಿದೆ. ಕೆಲವರು ಕಾಂಗ್ರೆಸ್ ತೊರೆದು ಬಿಜೆಪಿಯತ್ತ ಮುಖ ಮಾಡಿರುವುದು ಕಾಂಗ್ರೆಸ್‌ಗೆ ಹಿನ್ನೆಡೆಯುಂಟಾಗಿದೆ.
ಖ್ಯಾತ ನಟ ಕಮಲ್‌ಹಾಸನ್ ನೇತೃತ್ವದ ಮಕ್ಕಳ್ ನೀದಿಮಯಂ ಚುನಾವಣಾ ಅಖಾಡಕ್ಕೆ ಧುಮುಕಿದ್ದು ಹಲವು ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸುವ ವಿಶ್ವಾಸ ಹೊಂದಿದೆ.
ತಮಿಳುನಾಡಿನಲ್ಲಿ ಬೆಳಿಗ್ಗೆ ೭ ರಿಂದ ಮತದಾನ ಆರಂಭವಾಗಿದ್ದು, ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದ ದೃಶ್ಯ ಕಂಡುಬಂದಿತು. ತಾಪಮಾನ ಹೆಚ್ಚಾಗಿರುವ ಕಾರಣ ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಯತ್ತ ತೆರಳಿ ಹಕ್ಕನ್ನು ಚಲಾಯಿಸಿದರು.
ಇದೇ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವಕರು ಅತ್ಯಂತ ಹೆಚ್ಚು ಉತ್ಸಾಹದಿಂದ ಕೈಯಲ್ಲಿ ಗುರುತಿನ ಚೀಟಿ ಹಿಡಿದು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು.
ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈನ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದ ಸ್ಟೆಲ್ಲಾಮೇರಿ ಕಾಲೇಜಿನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ನಟ ಕಮಲ್‌ಹಾಸನ್, ಪುತ್ರಿಯರಾದ ಶ್ರುತಿ ಹಾಸನ್, ಅಕ್ಷರಾ ಹಾಸನ್ ಚೆನ್ನೈನ ತೈನಂಪೇಟೆಯ ಪ್ರೌಢಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಿಜೆಪಿಯಿಂದ ಸ್ಪರ್ಧಿಸಿರುವ ನಟಿ ಖುಷ್ಬು ಮತದಾನ ಮಾಡಿದರು.
ಕೇಂದ್ರಾಡಳಿತ ಪುದುಚೆರಿಯ ೩೦ ವಿಧಾನಸಭಾ ಕ್ಷೇತ್ರಗಳಿಗೆ ಶಾಂತಿಯುತ ಮತದಾನ ನಡೆಯುತ್ತಿದ್ದು, ೧೦.೩ ಲಕ್ಷ ಜನರು ೩೨೪ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಕಾಂಗ್ರೆಸ್ ಮತ್ತು ಡಿಎಂಕೆಯ ಪ್ರಮುಖ ನಾಯಕರು ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದು, ಈ ನಾಯಕರಿಗೆ ಬಿಜೆಪಿ ಮಣೆ ಹಾಕಿದೆ. ಹೀಗಾಗಿ ಇಲ್ಲಿ ಬಿಜೆಪಿ ಕಮಲ ಅರಳುವ ನಿರೀಕ್ಷೆ ಇದೆ.
ಮತದಾರರು ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಹೊತ್ತು ಕಳೆಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಮತದಾರರು ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದರು.
ಕೇರಳದ ೧೪೦ ವಿಧಾನಸಭಾ ಕ್ಷೇತ್ರಗಳಿಗೆ ಚುರುಕಿನ ಮತದಾನ ಪ್ರಗತಿಯಲ್ಲಿದೆ. ೧೪೦ ಕ್ಷೇತ್ರಗಳಲ್ಲಿ ೯೫೭ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ೨.೭೮ ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಬಾರಿಯ ಚುನಾವಣೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಎಲ್‌ಡಿಎಫ್ ಭ್ರಷ್ಟಾಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತದಾರರನ್ನು ಗೆಲ್ಲಲು ಕಸರತ್ತು ನಡೆಸಿದೆ. ಮತ್ತೊಂದೆಡೆ ಮೆಟ್ರೊ ಮ್ಯಾನ್ ಶ್ರೀಧರನ್ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ.
ಕೇರಳದಲ್ಲಿ ಬೆಳಿಗ್ಗೆಯಿಂದ ಮತದಾನ ಶಾಂತಿಯುತವಾಗಿ ನಡೆದಿದ್ದು, ಮತದಾರರು ಅತ್ಯಂತ ಹುರುಪು,ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಬಿಗಿ ಭದ್ರತೆ ಕೈಗೊಂಡಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಈ ಬಾರಿ ದೇಶದ ಗಮನ ಸೆಳೆದಿದೆ. ೩ನೇ ಹಂತದ ಮತದಾನದಲ್ಲಿ ೩೧ ಕ್ಷೇತ್ರಗಳಲ್ಲಿ ೨೦೫ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ೭೫.೮ ಲಕ್ಷ ಮತದಾರರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.
ಮತದಾರರು ಉತ್ಸಾಹದಿಂದ ಮತಗಟ್ಟೆ ಕೇಂದ್ರಗಳಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಎರಡು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಹಿಂಸಾಚಾರ ಸಂಭವಿಸಿತ್ತು. ಇದರ ನಡುವೆಯೂ ಮತದಾರರು ಆತ್ಮಸ್ಥೈರ್ಯದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿರುವ ದೃಶ್ಯ ಕಂಡು ಬಂದಿದೆ.
ಅಸ್ಸಾಂನಲ್ಲಿ ೩ನೇ ಹಾಗೂ ಅಂತಿಮ ಹಂತದ ಮತದಾನ ಶಾಂತಿಯುತವಾಗಿ ಸಾಗಿದೆ. ೪೦ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ೨೩೭ ಅಭ್ಯರ್ಥಿಗಳ ಭವಿಷ್ಯವನ್ನು ೭೯.೧೯ ಲಕ್ಷ ಮತದಾರರು ನಿರ್ಧರಿಸಲಿದ್ದಾರೆ.
ಕೊರೊನಾ ಸೋಂಕಿನ ನಡುವೆಯೂ ಮತದಾರರು ಅಗತ್ಯ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಂಡು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ.

ಚುನಾವಣಾ ಅಧಿಕಾರಿ ಅಮಾನತು
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ನಾಯಕನ ನಿವಾಸದಲ್ಲಿ ಇವಿಎಂ ಸಮೇತ ತಂಗಿದ್ದ ಅಧಿಕಾರಿಯನ್ನು ಕೇಂದ್ರ ಚುನಾವಣಾ ಆಯೋಗ ಅಮಾನತು ಮಾಡಿದೆ.
ಹೌರಾ ಜಿಲ್ಲೆಯ ಉತ್ತರ ಹುಲುಬೆಡಿಯಾ ವಿಧಾನಸಭಾ ಕ್ಷೇತ್ರಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿ ತಪನ್ ಸರ್ಕಾರ್ ತಮ್ಮ ಸಂಬಂಧಿಕರಾದ ಟಿಎಂಸಿ ನಾಯಕನ ಮನೆಗೆ ಮತಯಂತ್ರಗಳೊಂದಿಗೆ ತೆರಳಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಇದು ಚುನಾವಣಾ ಆಯೋಗದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಆರೋಪದ ಮೇಲೆ ಅಧಿಕಾರಿಯನ್ನು ಅಮಾನತು ಮಾಡಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಚುನಾವಣಾ ಆಯೋಗ ತಿಳಿಸಿದೆ.
ಅಸ್ಸಾಂನಲ್ಲಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂಗಳಿದ್ದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
೨ನೇ ಹಂತದ ಮತದಾನ ಅಂತ್ಯಗೊಂಡ ಕೆಲಗಂಟೆಗಳಲ್ಲೇ ಈ ಕಾರು ಪತ್ತೆಯಾಗಿತ್ತು. ಈ ಪ್ರಕರಣವು ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಚುನಾವಣಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು.