ಪಂಚರತ್ನ ಯೋಜನೆಗಳು ನಾಡಿನ ಜನರ ಬದುಕಿಗೆ ಆಸರೆ

ಕೋಲಾರ,ಜ,೨- ಬಡವರು-ಮಧ್ಯಮ ವರ್ಗದ ಜನರು ಇವತ್ತಿನ ಆರ್ಥಿಕ ಪರಿಸ್ಥಿತಿಯಲ್ಲಿ ವಸತಿ, ಆರೋಗ್ಯ ಮತ್ತು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳನ್ನ ಜಾರಿಗೆ ತರುವುದಕ್ಕೆ ಹಗಲಿರುಳು ಹೋರಾಟ ಮಾಡುತ್ತಿರುವುದರಿಂದ ಎಲ್ಲೆಡೆ ಜೆಡಿಎಸ್ ಅಭ್ಯರ್ಥಿಗಳನ್ನ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸ ಬೇಕೆಂದು ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಕರೆ ನೀಡಿದರು.
ರಹಮತ್ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ ಸಿಎಂಆರ್ ಶ್ರೀನಾಥ್ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜಾತಿ-ಧರ್ಮಗಳ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳನ್ನು ಜಾರಿಗೆ ತರುವುದಾಗಿ ಜನತೆಯ ಮುಂದೆ ಸಾಕ್ಷ್ಯಚಿತ್ರಗಳ ಮೂಲಕ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಇವತ್ತಿನ ಬೆಲೆ ಏರಿಕೆ ನಡುವೆ ಜನಸಾಮಾನ್ಯರು ಬದುಕಿನ ಬಾರವನ್ನ ಹೊರುವುದಕ್ಕೆ ಬೆವರು ಹರಿಸುತ್ತಿದ್ದಾರೆ. ಇವರಿಗೆ ಆಸರೆ ಯಾಗಬೇಕಾಗಿದ್ದ ಬಿಜೆಪಿ- ಕಾಂಗ್ರೆಸ್ ಪಕ್ಷಗಳು ಜನರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ಅವರು ಮೊದಲನೆ ಸಲ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯದ ಮೂಲಕ ಸಾರಾಯಿ,ಲಾಟರಿ ನಿಷೇಧ ಮಾಡಿದ್ದರು, ಶಾಲಾ-ಮಕ್ಕಳಿಗೆ ಬೈಸಿಕಲ್ ಕೊಟ್ಟರು. ಎರಡನೆ ಸಲ ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಕೊಟ್ಟ ಭರವಸೆಯಂತೆ ೨೫ ಸಾವಿರ ಕೋಟಿ ಸಾಲ ಮನ್ನಾ ಮಾಡಿದರು.
ಮುಂದಿನ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಉಚಿತವಾಗಿ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ, ರೈತ ಚೈತನ್ಯಯಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನ ಜಾರಿಗೆ ತರುವುದಕ್ಕೆ ಜೆಡಿಎಸ್ ಪಕ್ಷ ಬದ್ದವಾಗಿದೆ ಎಂದು ಜನತೆಯ ಮುಂದೆ ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಇದಕ್ಕೆ ಮತದಾರರು ಅವಕಾಶ ನೀಡಬೇಕೆಂದು ಸಿಎಂಆರ್ ಶ್ರೀನಾಥ್ ಮನವಿ ಮಾಡಿದರು.
ಕುಮಾರಸ್ವಾಮಿ ಅವರಿಗೆ ಮೊದಲಿನಿಂದಲೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ಮೇಲೆ ಅಭಿಮಾನ ಹೆಚ್ಚು, ಹಾಗೂ ಈ ಭಾಗದ ಶ್ರಮಜೀವಿಗಳಾದ ರೈತರ ಬಗ್ಗೆ ಕನಿಕರ. ಬಯಲು ಸೀಮೆ ಜಿಲ್ಲೆಯ ಜನರಿಗೆ ಕುಡಿಯುವ ನೀರನ್ನ ಒದಗಿಸುವ ಸಲುವಾಗಿ ಯರಗೋಳ್ ಯೋಜನೆಯನ್ನು ಜಾರಿಗೆ ತಂದರು.
ಆದರೆ ೧೬ ವರ್ಷ ಕಳೆದರೂ ಇದುವರೆಗೂ ಕಾಂಗ್ರೆಸ್- ಬಿಜೆಪಿ ಪಕ್ಷಗಳ ಜನರಿಗೆ ಒಂದು ಹನಿ ಕುಡಿಯುವ ನೀರು ಕೊಟ್ಟಿಲ್ಲ. ಇದೀಗ ಬೆಂಗಳೂರಿನ ಕೊಳಚೆ ನೀರನ್ನ ಯರಗೋಳ್ ಡ್ಯಾಂಗೆ ಬಿಟ್ಟು ಜನರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದರು.
ಕೋಲಾರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯ ನಿವಾಸಿಯಾಗಿ ನಾನು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ.ನಿಮ್ಮಗಳ ಸೇವೆಗೆ ಒಮ್ಮ ಅವಕಾಶ ಮಾಡಿ ಕೊಡಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಜಮೀರ್ ಪಾಷ ಮಾತನಾಡಿ ಜೆಡಿಎಸ್ ಪಕ್ಷವನ್ನು ಕುಟುಂಬ ರಾಜಕಾರಣ ಎಂದು ಹೇಳುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ಕುಟುಂಬಗಳು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ನಾಡಿನ ಜನತೆಗೆ ಗೊತ್ತಿದೆ. ರಾಷ್ಟ್ರೀಯ ಪಕ್ಷಗಳ ಗುಲಾಮಗಿರಿ ರಾಜಕಾರಣಕ್ಕೆ ಮುಂದಿನ ತಿಲಾಂಜಲಿ ಹಾಡಿ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರನ್ನ ಕರೆದುಕೊಂಡು ಬರುವುದಕ್ಕೆ ಕಾಂಗ್ರೆಸ್ ಮುಖಂಡರು ಹಗಲು-ರಾತ್ರಿ ಎನ್ನದೆ ಹೋರಾಟ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಈ ಸಲ ಜೆಡಿಎಸ್ ಪಕ್ಷದ ಪರವಾಗಿ ನಿಲ್ಲಬೇಕೆಂದು ಮನವಿ ಮಾಡಿದರು.
ಕೋಲಾರಕ್ಕೆ ಸಿದ್ದರಾಮಯ್ಯ ಅಲ್ಲ ಯಾರೇ ಬಂದರೂ ಗೆಲ್ಲುವುದು ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್. ಇವರು ಸ್ಥಳೀಯ ನಾಯಕರಾಗಿದ್ದಾರೆ. ಜನಸಾಮಾನ್ಯರ ಕೈಗೆ ಸಿಗುವ ವ್ಯಕ್ತಿ. ಈಗಾಗಲೇ ಕರೋನ ಒಂದು ಮತ್ತು ಎರಡನೇ ಅಲೆಯಲ್ಲಿ ಜನರ ಮನೆಬಾಗಿಲಿಗೆ ಹೋಗಿ ಸಹಾಯ ಮಾಡಿದ್ದಾರೆ. ಇಂತಹ ನಾಯಕನನ್ನ ನಾವು ಗೆಲ್ಲಿಸಿಕೊಳ್ಳಬೇಕೆಂದು ಹೇಳಿದರು.