ಪಂಚಮ ಸಾಲಿ ಮೀಸಲಾತಿಗೆ ಅ. ೧೫ರವರೆಗೆ ಗಡುವು

ದಾವಣಗೆರೆ.ಮಾ.೨೮; ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅಧಿವೇಶನದಲ್ಲಿ ಮಾತು ಕೊಟ್ಟಿದ್ದರಿಂದ ಧರಣಿ ಸತ್ಯಾಗ್ರಹವನ್ನು ಮುಂದೂಡಲಾಗಿದೆ ಎಂದು ಕೂಡಲಸಂಗಮದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳು ಭರವಸೆ ನೀಡಿದ ಹಿನ್ನಲೆ ಸೆಪ್ಟೆಂಬರ್ ೧೫ ರವರೆಗೆ ಧರಣಿ ಮುಂದೂಡಲಾಗಿದೆ. ಹಾದಿ ಬೀದಿಯಲ್ಲಿ ಸಿಎಂ ಅವರು ಭರವಸೆ ನೀಡಿಲ್ಲ. ಅಧಿವೇಶನದಲ್ಲಿ ಮಾತು ನೀಡಿದ್ದರು. ಅದಕ್ಕಾಗಿ ನಾವು ಧರಣಿ ಸತ್ಯಾಗ್ರಹವನ್ನು ಮುಂದೂಡಿದ್ದೇವೆ. ನಮ್ಮ ಬೇಡಿಕೆಗೆ ಸ್ಪಂದನೆ ದೊರೆಯದಿದ್ದರೆ ಅಕ್ಟೋಬರ್ ೧೫ ರೊಳಗೆ ಬೃಹತ್ ಮಟ್ಟದ ಉಗ್ರ ಹೋರಾಟ ಮಾಡಲಾಗುವುದು.೨೫ ಲಕ್ಷಕ್ಕೂ ಅಧಿಕ ಜನರು ಬೆಂಗಳೂರಿನಲ್ಲಿ ಸೇರಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದರು. ಪಂಚಮಸಾಲಿ ಸಮಾಜದವರು ಶಾಲೆ ದಾಖಲಾತಿಯಲ್ಲಿ ಪಂಚಮಸಾಲಿ ಎಂದು ನಮೂದು ಮಾಡಬೇಕು.
ಮುಂದಿನ ದಿನಗಳಲ್ಲಿ ೨ಎ ಮೀಸಲಾತಿ ಸಿಗುತ್ತದೆ, ಆಗ ತೊಂದರೆ ಅನುಭವಿಸುವ ಸಾಧ್ಯತೆಗಳಿವೆ ಅದಕ್ಕಾಗಿ ಶಾಲಾ ದಾಖಲಾತಿಗಳಲ್ಲಿ ಪಂಚಮಸಾಲಿ ಎಂದು ನಮೂದಿಸಬೇಕೆಂದು ತಿಳಿಸಿದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ
ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕೊಡಿಸಲು ನಾವು ಪಾದಯಾತ್ರೆ ಹಾಗೂ ಹೋರಾಟ ಮಾಡಿದ್ದೇವೆ. ಸಿಎಂ ಮನವಿ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರು ತಿಂಗಳ ಗಡವು ನೀಡಲಾಗಿದೆ.ಆದರೆ ಪಂಚಮಸಾಲಿ ಸಮಾಜದವರೇ ಆದ ಸಚಿವ ಮುರಗೇಶ ನಿರಾಣಿ ಅವರು ನಮ್ಮ ಹೋರಾಟದ ಬಗ್ಗೆ ವ್ಯಂಗ್ಯ ವಾಡುತ್ತಿದ್ದಾರೆ. ಎಲ್ಲಿ ಹೋಗಿದೆ ಮಾಡು ಇಲ್ಲವೇ ಮಡಿ ಹೋರಾಟ ಎಂದಿದ್ದಾರೆ ಅವರು ಹೋರಾಟದ ಬಗ್ಗೆ ಹಗುರವಾಗಿ ಮಾತನಾಡಬಾರದು. ಮೀಸಲಾತಿ ಕಲ್ಪಿಸುವಲ್ಲಿ ವಿಳಂಬವಾದರೆ ನಮ್ಮ ಹೋರಾಟ ಆರಂಭಿಸುತ್ತೇವೆ ಎಂದು ಸಚಿವ ನಿರಾಣಿ ವಿರುದ್ದ ವಾಗ್ದಾಳಿ ನಡೆಸಿದರು.