ಪಂಚಮಿತ್ರ ಪೋರ್ಟಲ್ ಲೋಕಾರ್ಪಣೆ ಮಾಡಿದ ಶಾಸಕ ಎಂ.ವೈ.ಪಾಟೀಲ

ಕಲಬುರಗಿ:ಮಾ.04: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಹಲವಾರು ಸೇವೆಗಳನ್ನು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಭಿವೃದ್ದಿಪಡಿಸಿರುವ ಪಂಚಮಿತ್ರ ಪೋರ್ಟಲ್‍ನ್ನು ಅಫಜಲಪೂರ ಶಾಸಕರಾದ ಎಂ.ವೈ. ಪಾಟೀಲ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿದರು.
ಸಾರ್ವಜನಿಕರು ತಮಗೆ ಅವಶ್ಯಕವಿರುವ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್-ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಹಾಗೂ ಕುಂದುಕೊರತೆಗಳನ್ನು ದಾಖಲಿಸಲು ” ಪಂಚಮಿತ್ರ” ವೇದಿಕೆಯು ಅನುಕೂಲವಾಗಲಿದೆ. ಈ ಸೌಲಭ್ಯವನ್ನು ಎಲ್ಲಾ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ ಅವರು ಮಾತನಾಡಿ, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಎಲ್ಲಾ ಬಗೆಯ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಲು ಯಾವುದೇ ನಿರ್ದಿಷ್ಟವಾದ ವೆಬ್ ಸೈಟ್ ಅಥವಾ ಪೋರ್ಟಲ್‍ಗಳು ಇರಲಿಲ್ಲ ದೇಶದಲ್ಲಿ ಪ್ರಪ್ರಥಮ ಬಾರಿಗೆ whatsapp Chat ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಪಂಚಮಿತ್ರ whatsapp Chat No. 8277506000 ಮೂಲಕ ಗ್ರಾಮ ಪಂಚಾಯತಿಗಳ ಮಾಹಿತಿ ಮತ್ತು ವಿವರಗಳನ್ನು ಪಡೆಯಬಹುದಾಗಿದೆ. ಚುನಾಯಿತ ಪ್ರತಿನಿಧಿಗಳ ವಿವರಗಳು, ಸಿಬ್ಬಂದಿಗಳ ವಿವರಗಳು, ಪೂರ್ಣಗೊಂಡ ಗ್ರಾಮ ಪಂಚಾಯತ್ ಸಭೆಗಳ ನಡಾವಳಿಗಳು, ಗ್ರಾಮ ಪಂಚಾಯತ್‍ಗಳ ಮುಂಬರುವ ಸಭೆಗಳ ಮಾಹಿತಿ, ಸೇವೆಗಳ ವಿವರಗಳು, ಸ್ವಸಹಾಯ ಗುಂಪಿನ ವಿವರಗಳು, ಆದಾಯ ಸಂಗ್ರಹ ವಿವರಗಳು ಮತ್ತು 4(1)(ಎ)&(1)(ಬಿ) ಆರ್‍ಟಿಐ ದಾಖಲೆಗಳು ಪಡೆಯಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಫೋಸ್ಟರ್‍ಗಳು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಉಪಕಾರ್ಯದರ್ಶಿ ಎಂ.ವಿ. ಚಳಿಕೇರಿ, ಕಾರ್ಯನಿರ್ವಾಹಕ ಅಭಿಯಂತರರಾದ ಶಿವಾನಂದ, ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸ ರಾಜ್,ವೀರಣ್ಣ ಕೌಲಗಿ, ಚನ್ನಪ್ಪ, ಶಂಕರ ರಾಠೋಡ, ಸೈಯದ್ ಪಟೇಲ್, ಅಂಬರೇಷ್ ಪಾಟೀಲ, ಸೇರಿದಂತೆ ಎಲ್ಲಾ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.