ಪಂಚಮಸಾಲಿ 2ಎ ಮೀಸಲಾತಿ ಕಲ್ಪಿಸದಿದ್ದರೆ ಬೃಹತ್ ಹೋರಾಟ

ಲಕ್ಷ್ಮೇಶ್ವರ, ಮಾ31: ಸರ್ಕಾರ ಕೊಟ್ಟ ಭರವಸೆಯಂತೆ ಸ.15ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸದಿದ್ದರೆ ಮತ್ತೇ ಅ.15 ರಿಂದ 25 ಲಕ್ಷ ಸಮಾಜ ಬಾಂಧವರೊಡಗೂಡಿ ಉಗ್ರ ಹೋರಾಟ ಶತಸಿದ್ಧ. ಇಲ್ಲದಿದ್ದರೆ ವಿಶ್ವಮಟ್ಟದ ಪಂಚಮಸಾಲಿ ಬೃಹತ್ ಹೋರಾಟದ ಮೂಲಕ ಪ್ರಧಾನ ಮಂತ್ರಿಗಳಿಗೂ ಹಕ್ಕೊತ್ತಾಯ ಮಾಡಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಕೈಗೊಂಡ ಶರಣಾರ್ಥಿ ಸಂದೇಶ(ಅಭಿನಂದನಾ) ಜಾಥಾದಲ್ಲಿ ಪಾಲ್ಗೊಂಡು ಬಳಿಕ ಶ್ರೀ ರಂಭಾಪುರಿ ಜ.ವೀರಗಂಗಾಧರ ಕಲ್ಯಾಣ ಮಂಟಪದಲ್ಲಿ ಸಮಾಜ ಬಾಂಧವರಿಗೆ ಶರಣಾರ್ಥಿ ಸಂದೇಶ ನೀಡಿದರು. ಕೃಷಿಯನ್ನೇ ಮೂಲಾಧಾರವಾಗಿಸಿಕೊಂಡು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿ ಬಡತನದಲ್ಲಿಯೇ ಕಾಲ ಕಳೆಯುತ್ತಾ ಬಂದಿರುವ ಸಮಾಜದ ಶ್ರೇಯೋಭಿವೃದ್ಧಿಗಾಗಿ 2ಎ ಮೀಸಲಾತಿ ಇಂದಿನ ಅಗತ್ಯವಾಗಿದೆ. ನ್ಯಾಯಸಮ್ಮತವಾದ ಮೀಸಲಾತಿ ಪಡೆಯಲೇಬೇಕು ಎಂಬ ಸಮಾಜದ ಒಕ್ಕೊರಲ ಬೇಡಿಕೆಗೆ ಗಟ್ಟಿಧ್ವನಿಯಾಗಿ ಕೈಗೊಂಡ ಹೋರಾಟಕ್ಕೆ ಸಮಾಜದ ಬೆಂಬಲಕ್ಕೆ ಶರಣು-ಶರಣಾರ್ಥಿ. ಹೋರಾಟದ ಸ್ವರೂಪ ಅರಿತ ಸಿಎಂ ಬಿಎಸ್‍ವೈ ಅವರು 6 ತಿಂಗಳ ಕಾಲಾವಕಾಶ ಕೇಳಿದ್ದಾರೆ. ಸಚಿವರು, ಸಮಾಜದ ರಾಜಕೀಯ ನಾಯಕರು, ನಮ್ಮ ಸಮಾಜದ ಹಿರಿಯರ ಒಮ್ಮತದ ನಿರ್ಣಯ, ಮುಖ್ಯಮಂತ್ರಿಗಳ ಮೇಲಿನ ನಂಬಿಕೆ, ಗೌರವ, ವಿಶ್ವಾಸದಿಂದ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಆದರೆ 2ಎ ಮೀಸಲಾತಿ ಆದೇಶ ಕೈ ಸೇರಿದಾಗಲೇ ಹೋರಾಟಕ್ಕೊಂದು ಅಂತಿಮ ರೂಪ ನೀಡಲಾಗುವುದು ಎಂಬುದು ಸ್ಪಷ್ಟ. ಸಮಾಜ ಬಾಂಧವರನ್ನೊಳಗೊಂಡ ನಮ್ಮ ಹೋರಾಟಕ್ಕೆ ಸಮಾಜದ ಪೈರ್‍ಬ್ರ್ಯಾಂಡ್ ಆಗಿರುವ ಬಸನಗೌಡ ಪಾಟೀಲ ಯತ್ನಾಳ ಮತ್ತು ವಿಜಯಾನಂದ ಕಾಶಪ್ಪನವರಂತವರಿಂದಾಗಿ ಸರ್ಕಾರ ಭರವಸೆ ನೀಡಿದೆ
712 ಕಿ.ಮೀ ಪಂಚಲಕ್ಷ ಹೆಜ್ಜೆ ಪಾದಯಾತ್ರೆ, 39 ದಿನಗಳ ಕಾಲದ ಧರಣಿ ಸತ್ಯಾಗ್ರಹ ಮತ್ತು 23 ದಿನಗಳ ಕಾಲಾವಧಿಯ ಶರಣಾರ್ಥಿ ಜಾಥಾಕ್ಕೆ ತಾಲೂಕಿನ ಸ್ವಾಭಿಮಾನಿ ಸಮಾಜ ಬಾಂಧವರು ಕೊಟ್ಟ, ತನು,ಮನ, ಧನದ ಸಹಾಯ-ಸಹಕಾರ, ಬೆಂಬಲ, ಕಳಕಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಶಿಷ್ಯರಿದ್ದಲ್ಲಿಗೆ ಗುರುಗಳು ಬಂದು ಕೈಲಾದಮಟ್ಟಿಗಿನ ಶಿಷ್ಯಋಣಭಾರ ಇಳಿಸಿಕೊಳ್ಳುವಂತಹ ಶರಣಾರ್ಥಿ ಸಂದೇಶ ಜಾಥಾ ತಮಗೆ ಸಂತಸ ತಂದಿದೆ ಎಂದರು.
ಈ ವೇಳೆ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸರ್ಕಾರ ಕೊಟ್ಟ ಭರವಸೆ ಈಡೇರಿಸಬೇಕು. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಸರಳ ಬಹುಮತದೊಂದಿಗೆ ಆಡಳಿತ ನಡೆಸಲು ಸಮಾಜದ ಸಹಕಾರ ಮುಖ್ಯವಾಗಿದೆ.
ಗಂಗಣ್ಣ ಮಹಾಂತಶೆಟ್ಟರ ಮಾತನಾಡಿ, ಉತ್ತರ ಕರ್ನಾಕದ ಜನತೆ ಅದರಲ್ಲೂ ಮುಖ್ಯವಾಗಿ ಪಂಚಮಸಾಲಿ ಸಮಾಜದ ಬೆಂಬಲದಿಂದ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯುವಂತಾಗಿದೆ. ಸರ್ಕಾರ ಸಮಾಜದ ಋಣ ತೀರಿಸುವ ಕಾರ್ಯ ಮಾಡಬೇಕು ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಪೂರ್ಣಿಮಾ ಪಾಟೀಲ, ಚನ್ನಪ್ಪ ಜಗಲಿ, ವಿಜಯ ಮೆಕ್ಕಿ, ಡಿ.ವೈ. ಹುನಗುಂದ, ಎಂ.ಆರ್.ಪಾಟೀಲ, ಮಹಾದೇವಪ್ಪ ಅಣ್ಣಿಗೇರಿ, ಬಸವೇಶ ಮಹಾಂತಶೆಟ್ಟರ, ಶಿವನಗೌಡ ಅಡರಕಟ್ಟಿ, ದ್ಯಾಮಣ್ಣ ಕಮತದ, ಸುಲೋಚನಾ ಜವಾಯಿ, ಮಂಜುನಾಥ ಮಾಗಡಿ, ರಮೇಶ ಹಾಳದೋಟದ, ಬಸವರಾಜ ಹೊಗೆಸೊಪ್ಪಿನ, ನಾಗರಾಜ ಚಿಂಚಲಿ,ಉಳವೇಶ ಪಾಟೀಲ,ಮಂಜು ನೆರೆಗಲ್, ಅರುಣ ಮೆಕ್ಕಿ, ಈರಣ್ಣ ಮುಳಗುಂದ, ರಮೇಶ ದನದಮನಿ, ಆನಂದ ಮಹಾಂತಶೆಟ್ಟರ, ಸಂತೋಷ ಜಾವೂರ, ಈರಣ್ಣ ಕಟಗಿ, ಮಂಜುನಾಥ ಗೌರಿ ಸೇರಿ ಪಂಚಮಸಾಲಿ ಸೇವಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಎಸ್.ಎಫ್. ಆದಿ, ಎಂ.ಎಸ್.ಚಾಕಲಬ್ಬಿ, ಎಲ್.ಎಸ್. ಅರಳಿಹಳ್ಳಿ ನಿರ್ವಹಿಸಿದರು.