ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಲು ಮನವಿ

ಸಂಡೂರು:ಅ:29: ಅ:29:ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹಾಗೂ ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಂತಹ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಬೇಕು, ಕೇಂದ್ರದಲ್ಲಿ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು ಇಲ್ಲವಾದಲ್ಲಿ ಮುಂದಿನ ಹಂತದಲ್ಲಿ ಪ್ರತಿಭಟನೆಯು ಅನಿವಾರ್ಯವಾಗುತ್ತದೆ ಎಂದು ರಾಜ್ಯ ಪಂಚಮಸಾಲಿ ಅಧ್ಯಕ್ಷ ಬಿ.ನಾಗನಗೌಡ ಮನವಿ ಮಾಡಿಕೊಂಡರು.
ಅವರು ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ರಶ್ಮಿಯವರಿಗೆ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಘಟಕ ಹಮ್ಮಿಕೊಂಡಿದ್ದ 2ಎ ಮೀಸಲಾತಿಗೆ ಸೇರಿಸಬೇಕು ಎಂದು ಮನವಿ ಪತ್ರ ನೀಡಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ 86 ಲಕ್ಷ ಜನಸಂಖ್ಯೆ ಹೊಂದಿರುವ ಬೃಹತ್ ಸಮಾಜ ಇದಾಗಿದೆ, ಶೇ: 90% ಕೃಷಿ ಹಾಗೂ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಶಿಕ್ಷಣ, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಸಲುವಾಗಿ ರಾಜ್ಯ ಸರ್ಕಾರದ ಪ್ರವರ್ಗ 2ಎ ದಲ್ಲಿ ಸೇರಿಸಿ ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯಪರತೆಯನ್ನು ಕಾಪಾಡಿಕೊಳ್ಳಲು ಈ ಮೂಲಕ ರಾಜ್ಯದ 86 ಲಕ್ಷ ಜನಸಂಖ್ಯೆಯ ಪರವಾಗಿ ಮುಖ್ಯಮಂತ್ರಿಗಳಾದ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ. ದಿನಾಂಕ 17.12.2003ರಲ್ಲಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ರವರನ್ನು ಭೇಟಿಯಾಗಲು 239 ಜನ ವೀರಶೈವ ಲಿಂಗಾಯ ಪಂಚಮಸಾಲಿ ಸಮುದಾಯದ ರಾಜ್ಯ ನಿಯೋಗ ಅಂದಿನ ರಾಜ್ಯಾಧ್ಯಕ್ಷರಾದ ಭಾವಿಬೆಟ್ಟಪ್ಪನವರ ನೇತೃತ್ವದಲ್ಲಿ ಪ್ರಧಾನಿಯವರಿಗೆ ಸಮಾಜವನ್ನು ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಸೇರಿಸಲು ಮನವಿ ಮಾಡಿಕೊಂಡಾಗ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಿ ಕಳಿಸಿದಲ್ಲಿ ಓಬಿಸಿ ಪಟ್ಟಿಗೆ ಸಮುದಾಯವನ್ನು ಸೇರಿಸಲಾಗುವುದು ಎಂದು ತಿಳಿಸಿದ್ದರು. ಅದ್ದರಿಂದ ಈಗ ತಕ್ಷಣ ಕೇಂದ್ರಕ್ಕೆ ಶಿಫಾರಸ್ಸು ಹಾಗೂ ರಾಜ್ಯದಲ್ಲಿ ಪ್ರವರ್ಗ 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಶೆಟ್ರು ನಾಗರಾಜ ಮಾತನಾಡಿ 14.04.2008 ರಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಜಗದ್ಗುರುಗಳ ಸಮ್ಮುಖದಲ್ಲಿ ಮಾತು ಕೊಟ್ಟಂತೆ ಪ್ರವರ್ಗ 2ಎ ಗೆ ಸೇರಿಸಲು ಇನ್ನೂ ಸಹ ಸಾಧ್ಯವಾಗಿಲ್ಲ. ಆ ಕಾರಣಕ್ಕಾಗಿ ಇಡೀ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ವರ್ಗ2ಎ ಹಾಗೂ ಕೇಂದ್ರದಲ್ಲಿ ಪಂಚಮಸಾಲಿ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಪತ್ರವನ್ನು ಕೇಂದ್ರಕ್ಕೆ ರವಾನಿಸಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ ಎಂದರು.
ಮನವಿ ಪತ್ರವನ್ನು ರಾಜ್ಯಾಧ್ಯಕ್ಷ ಬಿ.ನಾಗನಗೌಡ, ಜಿಲ್ಲಾಧ್ಯಕ್ಷ ಬಪ್ಪಕಾನ್ ಕುಮಾರಸ್ವಾಮಿ, ತಾಲೂಕು ಅಧ್ಯಕ್ಷ ಶೆಟ್ರುನಾಗರಾಜ, ಪ್ರಧಾನ ಕಾರ್ಯದರ್ಶಿ ಗಡಾದ್ ರಮೇಶ್, ಮುಖಂಡರಾದ ಮೇಲು ಸೀಮೆ ಶಂಕ್ರಪ್ಪ, ಹೆಚ್.ಕೆ. ಯರ್ರಿಸ್ವಾಮಿಗೌಡ, ಕೆ.ಬಿ.ಪ್ರಕಾಶ್, ವೀರೇಶ್ ಇತರ ಹಲವಾರು ಸಮಾಜದ ಗಣ್ಯರು ತಹಶೀಲ್ದಾರ್ ರಶ್ಮಿಯವರಿಗೆ ಮನವಿ ಪತ್ರ ಸಲ್ಲಿಸಿದರು.