ಪಂಚಮಸಾಲಿ ಸಮಾಜದಿಂದ ಶರಣು ಶರಣಾರ್ಥಿ ಕಾರ್ಯಕ್ರಮ

ಕಲಬುರಗಿ,ಏ.03:ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 5ರಂದು ಮಧ್ಯಾಹ್ನ 1 ಗಂಟೆಗೆ ಅಖಿಲ ಭಾರತ ದೀಕ್ಷ ಪಂಚಮಸಾಲಿ ಲಿಂಗಾಯತ ಸಮಾಜದ ವತಿಯಿಂದ ಶರಣು ಶರಣಾರ್ಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಶರಣು ಪಪ್ಪಾ ಅವರು ಇಲ್ಲಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತೃತ್ವವನ್ನು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಜಯ ಮೃತ್ಯುಂಜಯ್ ಸ್ವಾಮೀಜಿ ಅವರು ವಹಿಸುವರು ಎಂದರು.
ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿ ಹಾಗೂ 84 ಉಪ ಜಾತಿಗಳನ್ನು ಓಬಿಸಿಗೆ ಸೇರಿಸಬೇಕು ಎಂದು ಆಗ್ರಹಿಸಿ ಸುಮಾರು 700 ಕಿ.ಮೀ. ಪಾದಯಾತ್ರೆ ಮಾಡುವ ಮೂಲಕ ಜಗದ್ಗುರು ಮೃತ್ಯುಂಜಯ್ ಸ್ವಾಮೀಜಿ ಅವರು ಇಡೀ ರಾಜ್ಯದ ಗಮನವನ್ನು ಸೆಳೆದಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ರಾಜ್ಯ ಸರ್ಕಾರವು ನವೆಂಬರ್‍ವರೆಗೂ ಕಾಲಾವಕಾಶ ಕೋರಿದೆ. ಆ ಹಿನ್ನೆಲೆಯಲ್ಲಿ ಹೋರಾಟವನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿಯವರೆಗೂ ಹೋರಾಟಕ್ಕೆ ಸಹಕರಿಸಿದ ರಾಜ್ಯದ ಪ್ರತಿ ಜಿಲ್ಲೆಯ ಸಮಾಜದ ಎಲ್ಲ ಹಿರಿಯರಿಗೆ ಹಾಗೂ ರಾಜಕೀಯ ಮುಖಂಡರಿಗೆ ಶರಣು ಶರಣಾರ್ಥಿ ಕಾರ್ಯಕ್ರಮದ ಮೂಲಕ ಧನ್ಯವಾದ ಅರ್ಪಿಸಲಾಗುವುದು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹುನಗುಂದ್ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ್ ಕಾಶಪ್ಪನವರ್, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಂತಾದವರು ಆಗಮಿಸುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಹಾಂತೇಶ್ ಪಾಟೀಲ್, ಮಲ್ಲಣಗೌಡ ಪಾಟೀಲ್, ರವಿ ಪಾಟೀಲ್, ಜಿ.ಬಿ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.