ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟ: ರಕ್ತ ದಾಸೋಹ ಮೂಲಕ

ದಾವಣಗೆರೆಯಿಂದಲೇ ಆರಂಭದಾವಣಗೆರೆ.ಡಿ.೨೩;  ಕಳೆದ 2 ದಶಕಗಳಿಂದ ಆಡಳಿತ ನಡೆಸಿದ ಎಲ್ಲಾ ಮುಖ್ಯಮಂತ್ರಿಗಳಿಗೂ ಸಮಾಜದಿಂದ ಸನ್ಮಾನ ಗೌರವ ಮಾಡಲಾಗಿದೆ. ಈ ಸಂದರ್ಭದಲ್ಲಿ 2 ಎ ಮೀಸಲಾತಿ ಕುರಿತಂತೆ ಸಾಕಷ್ಟು ಮನವಿ ಕೂಡ ಸರ್ಕಾರಕ್ಕೆ  ನೀಡಲಾಗಿದೆ. ಶಾಂತಿಯುತವಾಗಿ ಹೋರಾಟ ಸಹ ಮಾಡಿ ಸರ್ಕಾರದ ಗಮನ ಸೆಳೆದಿದ್ದೇವೆ ಯಾರು ಸಹ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿಲ್ಲ. ಬೆಳಗಾವಿ ವಿಧಾನಸೌಧ ಬಳಿ ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ಹೋರಾಟವನ್ನ ಮಾಡುತ್ತಲೇ ಬಂದಿದ್ದೇವೆ, ಇದೀಗ ನಮ್ಮ ಜನ್ಮದಿನದಂದು ರಕ್ತದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸರ್ಕಾರನ್ನ ಎಚ್ಚೆತ್ತುಗೊಳಿಸುತ್ತಿದ್ದೇವೆ. ನನ್ನ ಜನ್ಮಭೂಮಿ ದಾವಣಗೆರೆಯಿಂದಲೇ ನಾನು ರಕ್ತ ಕೊಡುವ ಮೂಲಕ ಹೋರಾಟಕ್ಕೆ ಚಾಲನೆ ಕೊಡಬೇಕೆಂದು ಬಂದಿದ್ದೆ ಆದರೆ ಮಹಾಪೌರರಾದ ಅಜಯ್ ಕುಮಾರ್ ಕೂಡಲ ಸಂಗಮದಲ್ಲೇ ನೀವು ರಕ್ತದಾನ ಮಾಡಿ ಭಕ್ತರು ಮೊದಲು ಇಲ್ಲಿಂದ ರಕ್ತ ಕೊಟ್ಟು ಹೋರಾಟ ಆರಂಭಿಸುತ್ತೇವೆ ಎಂದ ಕಾರಣ ಕೂಡಲ ಸಂಗಮದಿಂದಲೇ ರಕ್ತದಾನ ಮಾಡಿ ಹೋರಾಟ ಆರಂಭಿಸುವೆ ಎಂದು ಶ್ರೀಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಪಂಚಮಸಾಲಿ ಸಮಾಜಕ್ಕೆ ಕೇಂದ್ರದಿಂದ ಓಬಿಸಿ ಹಾಗೂ ರಾಜ್ಯದಿಂದ 2 ಎ ಮೀಸಲಾತಿ ನೀಡಬೇಕು ಈ ಹಿನ್ನೆಲೆ ದಾವಣಗೆರೆಯಿಂದಲೇ ಚಾಲನೆ ಕೊಡಲಾಗಿದೆ. ನಾವು ಇದುವರೆಗೂ ಶಾಂತಿಯುತವಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ನೀಡುವ ಮೂಲಕ ಒತ್ತಾಯ ಮಾಡಿದ್ದೇವೆ ಇದೀಗ ಸಮಾಜದ ಮುಖಂಡರ ತೀರ್ಮಾನದಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ರಕ್ತ ಕೊಡುತ್ತೇವೆ ಮೀಸಲಾತಿ ಕೊಡಿ ಎಂಬ ಘೋಷಣೆ ಮೂಲಕ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಜನವರಿ 14ರೊಳಗೆ ಈ ಬಗ್ಗೆ ತೀರ್ಮಾನ ಕೈಗೊಂಡು ನಮ್ಮ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು. ಇಲ್ಲವಾದರೆ ಕೂಡಲ ಸಂಗಮದಲ್ಲಿ ಪ್ರತಿವರ್ಷ 14 ರಂದು ಕೃಷಿ ಸಮ್ಮೇಳನ ಮಾಡುತ್ತೇವೆ ಆ ಸಮಾರಂಭದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡು ರಕ್ತ ಕೊಟ್ಟು ಹೋರಾಟ ಮಾಡುತ್ತೇವೆ ಅಲ್ಲಿಂದಲೇ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಮೂಲಕ ಶಕ್ತಿಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದರು. ಸರ್ಕಾರ ಇದಕ್ಕೂ ಮಣಿಯದಿದ್ದರೆ  ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಬಳಿಕ ಮಾತನಾಡಿದ ಮೇಯರ್ ಅಜಯ್ ಕುಮಾರ್  ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡುತ್ತಾರೆ ಎಂಬ ನಂಬಿಕೆ ಇದೆ. ಜನವರಿ 14 ರೊಳಗೆ ಘೋಷಣೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಪಂಚಮಸಾಲಿ ಸಮಾಜಕ್ಕೆ ಕೂಡಲ ಸಂಗಮ ಜಗದ್ಗುರುಗಳು ಹೋರಾಟ ಮಾಡುತ್ತಿದ್ದು ಇದೀಗ ರಕ್ತ ದಾಸೋಹ ಕಾರ್ಯಕ್ರಮಕ್ಕೆ ದಾವಣಗೆರೆಯಿಂದಲೇ ಆರಂಭ ಮಾಡಿದ್ದೇವೆ ಕೂಡಲ ಸಂಗಮಕ್ಕೆ ನಾವೆಲ್ಲರೂ ಹೋಗಿ ಶ್ರೀಗಳು ರಕ್ತದಾನ ಮಾಡಿ ಅಲ್ಲಿಂದ ಪಾದಯಾತ್ರೆ ಮಾಡುತ್ತೇವೆ ಎಂದರು.ಇದೇವೇಳೆ ಮಾತನಾಡಿದ ಲಿಂಗಾಯತ ಪಂಚಮಸಾಲಿ ಸಮಾಜ ಜಿಲ್ಲಾ ಉಸ್ತುವಾರಿಗಳು ಜೆಡಿಎಸ್ ಉತ್ತರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಶ್ರೀಧರ್ ಪಾಟೀಲ್ ಕೂಡಲ ಸಂಗಮ ಜಗದ್ಗುರುಗಳ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. 2 ಎ ಮೀಸಲಾತಿ ಸಿಗುವರೆಗೂ ನಾವು ಹೋರಾಟ ಮಾಡುತ್ತೇವೆ ಅವರ ಬೆಂಬಲಕ್ಕೆ ಇರುತ್ತೇವೆ. ನಮ್ಮ ಸಮಾಜದಲ್ಲೂ ಬಡ ಪ್ರತಿಭಾನ್ವಿತ ಮಕ್ಕಳಿದ್ದಾರೆ ಮೀಸಲಾತಿ ಇಲ್ಲದ ಕಾರಣ ಎಷ್ಟೋ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉದ್ಯೋಗ ವಂಚಿತರಾಗಿದ್ದಾರೆ ಇದೀಗ ಶ್ರೀಗಳು ಇಡೀ ಸಮಾಜದ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ನಾನು ನಮ್ಮ ಸಮಾಜದ ಯುವ ಘಟಕ ಉಸ್ತುವಾರಿವಾಗಿ ಜಿಲ್ಲಾದ್ಯಂತ ಸಂಘಟನೆ ಮಾಡುತ್ತಿದ್ದು ಶ್ರೀಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇನೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವವರೆಗೂ ಹೋರಾಟ ಮಾತ್ರ ನಿಲ್ಲುವುದಿಲ್ಲ ರಕ್ತ ಕೊಟ್ಟು ಮೀಸಲಾತಿ ಪಡೆಯುತ್ತೇವೆ ಎಂದರು. ಈ ವೇಳೆ ಭಕ್ತಾಧಿಗಳು ಇದ್ದರು.