ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಖಚಿತ:ಸಿಂಗ್


ಸಂಜೆವಾಣಿ ವಾರ್ತೆ
ಹೊಸಪೇಟೆ, ನ.13:ವಿಜಯದ ಸಂಕೇತವಾಗಿರುವ ವಿಜಯನಗರ ನೆಲದಿಂದ 2ಎ ಮೀಸಲಾತಿ ಕೂಗು ಎದ್ದಿದೆ. ಹೀಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವುದು ಖಚಿತ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ನಗರದ ದೀಪಾಯಾನ ಶಾಲಾ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮನ 199 ನೇ ವಿಜಯೋತ್ಸವ ಹಾಗೂ ಪಂಚಮಸಾಲಿ 2ಎ ಮೀಸಲಾತಿ ಜನಜಾಗೃತಿ ಬೃಹತ್ ಜಿಲ್ಲಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಜಯನಗರ ಸಾಮ್ರಾಜ್ಯ ಹಾಗೂ ಪಂಪಾ ವಿರೂಪಾಕ್ಷನ ಹೆಸರಿನಲ್ಲಿ ಜಿಲ್ಲೆ ಅಭಿವೃದ್ಧಿತ್ತ ಸಾಗುತ್ತಿದೆ. ವಿರೂಪಾಕ್ಷ, ಭುವನೇಶ್ವರಿ ದೇವಿ ಕೃಪೆಯಿಂದ 2ಎ ಮೀಸಲಾತಿ ಸಿಗುವುದು ನಿಶ್ಚಿತ. ಈ ಕುರಿತು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತರಲಾಗುವುದು ಎಂದರು.
ಜಾತಿ ವ್ಯವಸ್ಥೆಗಿಂತಲೂ ಮಾನವತ್ವದ ಮೇಲೆ ಹೆಚ್ಚು ನಂಬಿಕೆ ಇದೆ. ನಾನು ಎಂದಿಗೂ ಜಾತಿ ರಾಜಕಾರಣ ಮಾಡುವುದಿಲ್ಲ. ಸಂವಿಧಾನದತ್ತವಾಗಿ ದೇಶದ ಪ್ರತಿಯೊಬ್ಬರಿಗೆ ಮೀಸಲಾತಿ ಹಕ್ಕು ಸಿಗಬೇಕಿದೆ. ಪಕ್ಷತೀತವಾಗಿ 2ಎ ಮೀಸಲಾತಿ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಹೂವಿನಹಡಗಲಿ ಶಾಸಕ ಹಾಗೂ ಮಾಜಿ ಸಚಿವ ಪಿ.ಟಿ.ಪರೇಶ್ವರ ನಾಯ್ಕ ಮಾತನಾಡಿ, ಕಾಯಕಯೋಗಿ ಪಂಚಮಸಾಲಿ 2ಎ ಮೀಸಲಾತಿ ಹೋರಾಟಕ್ಕೆ ಸದಾ ಬೆಂಬಲಿಸುವುದಾಗಿ ಭರವಸೆ ನೀಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ ಮಾತನಾಡಿ,
ಪಂಚಮಸಾಲಿ ಸಮಾಜ ಸಾಮಾಜಿವಾಗಿ ಮುಂದುವರೆದಿದ್ದರೂ ಶೈಕ್ಷಣಿಕವಾಗಿ, ಉದ್ಯೋಗ ಅವಕಾಶ ಗಿಟ್ಟಿಸಿಕೊಳ್ಳವಲ್ಲಿ ಹಿಂದಿದೆ. ಹಿಂದೆ ಮೀಸಲಾತಿ ಇಲ್ಲದ ಬದುಕಿದ ಸಮಾಜಕ್ಕೆ ಇಂದು ಮೀಸಲಾತಿ ಅಗತ್ಯವಿದೆ. 2ಎ ಮೀಸಲಾತಿಗಾಗಿ ಸಚಿವ ಆನಂದ ಸಿಂಗ್ ಅವರ ನೇತೃತ್ವದಲ್ಲಿ ಬಳಿ ನಿಯೋಗ ತೆರಳಿ ಸಿಎಂ ಬಸವರಾಜ ಬೊಮ್ಮಾಯಿವರ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿಗಳು ಸಮಾಜಕ್ಕೆ 2ಎ ನೀಡುವ ಭರವಸೆ ಇದೆ ಎಂದರು.
ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಜಿ.ಪಿ.ಪಾಟೀಲ್ ಮಾತನಾಡಿ, ದಲಿತ-ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಹಕ್ಕು ಸಿಗಲಿ ಎಂಬ ಉದ್ದೇಶದಿಂದ ನಾವುಗಳು ಮೌನವಾಗಿದ್ದೇವು. ಈಗ ನಾವು ಸುಮ್ಮಿರಲು ಸಾಧ್ಯವಿಲ್ಲ. ಎಲ್ಲರಿಗೂ ಮೀಸಲಾತಿ ಕೊಟ್ಟಿರುವ ಸರ್ಕಾರಕ್ಕೆ ನಮಗೆ ಮೀಸಲಾತಿ ಕೊಡಲು ಏನು ಗಂಟು ಹೋಗುತ್ತೆ. ಬೆಳಗಾವಿ ಚಳಿಕಾಲದ ಅಧಿವೇಶದಲ್ಲಿ ಪಂಚಾಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಬೇಕು. ಯಾರದೋ ಒತ್ತಡಕ್ಕೆ ಮಣಿದು ಮೀಸಲಾತಿ ನೀಡಲು ಮೀನಮೇಷ ಎಣಿಸಿದರೆ, ಮುಂದಿನ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದ ಶಕ್ತಿ ಏನೆಂಬು ತೋರಿಸುತ್ತೇವೆ ಎಂದು ಎಚ್ಚರಿಸಿದರು.
ಕೂಡ್ಲಿಗಿ ಶಾಸಕ ಗೋಪಾಲಕೃಷ್ಣ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದ ಬಾಂಧವರು ನನಗೆ ಆರ್ಶಿವಾದ ಮಾಡಿದ್ದಾರೆ. ಅವರ ಋಣ ನನ್ನ ಮೇಲಿದೆ. ಅವರ ಋಣ ತೀರಿಸಲು 2 ಮೀಸಲಾತಿ ಕೊಡಿಸಲು ಸರ್ಕಾರದ ಗಮನ ಸೆಳೆಯುವೆ ಎಂದರು.
ಶಾಸಕ ಭೀಮನಾಯ್ಕ ಮಾತನಾಡಿ, ಎಲ್ಲ ಸಮಾಜದ ಆರ್ಶಿವಾದದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ವಿಶೇಷವಾಗಿ ಪಂಚಮಸಾಲಿ ಸಮಾಜದ ಆರ್ಶಿವಾದ ನನ್ನ ಮೇಲಿದೆ ಎಂದು ಸ್ಮರಿಸಿದರು.
ವೈ ದೇವೆಂದಪ್ಪ ಮಾತನಾಡಿ, 2ಎ ಮೀಸಲಾತಿ ಕೊಡಿಸಲು ಸಂಸದ ಕರಡಿ ಸಂಗಣ್ಣ ಮತ್ತು ನಾನು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಅವರ ಗಮಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಸಮಾಜದ ಮುಖಂಡರಾದ ಬಾವಿಬೆಟ್ಟಪ್ಪ, ಬಿ.ಸಿ ಉಮಾಪತಿ, ಬಸವರಾಜ ದಿಂಡೂರು, ಬಿ.ನಾಗನಗೌಡ, ಸೋಮನಗೌಡ ಪಾಟೀಲ್, ನಗರಸಭೆ ಉಪಾಧ್ಯಕ್ಷ ಎಲ್.ಎಸ್.ಆನಂದ್, ಬಸಾಪುರ ಬಸವರಾಜ, ಸುಮಂಗಳ ಬಸವರಾಜ, ಮಂಜುನಾಥ ನವಲಗುಂದ, ಮಂಗಳ ಬಸವರಾಜ, ಅಶ್ವಿನ್ ಕೊತ್ತಂಬರಿ ಸ್ವಾಗತಿಸಿ, ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘದ ಯುವಘಟಕದ ಪ್ರಧಾನ ಕಾರ್ಯದರ್ಶಿ ಕಿಚಡಿ ಕೊಟ್ರೇಶ್, ಮಾತನಾಡಿದರು.

ಮೆರವಣಿಗೆ:
ನಗರದ ಜಗದ್ಗುರು ಶ್ರೀ ಕೊಟ್ಟೂರು ಸ್ವಾಮಿ ಮಠದ ಆವರಣದಿಂದ ಬಸವಣ್ಣ ಪ್ರತಿಮೆ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಭಾವಚಿತ್ರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗುಳು ಚೆನ್ನಮ ವೇಷಧಾರಿ ಮಕ್ಕಳು ಗಮನ ಸೆಳೆದರು. ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆ ಸಾಗಿ ಬಂದರು.

ನಗರದ ಪ್ರಮುಖ ವೃತ್ತದಲ್ಲಿ ಕ್ರಾಂತಿಯೋಗಿ ಬಸವಣ್ಣನ ಕಂಚಿನ ಪ್ರತಿಮೆ ಅನಾವರಣ ಹಾಗೂ ವೃತ್ತಕ್ಕೆ ನಾಮಕರಣ ಮಾಡಲಾಗುವುದು. ಅಲ್ಲದೆ, ಕಿತ್ತೂರು ರಾಣಿ ಚನ್ನಮ್ಮ ಅವರ ಸೇರಿದಂತೆ ಅನೇಕ ಮಹನೀಯರ ಪುತ್ಥಳಿ ಸ್ಥಾಪನೆ ಮಾಡಲಾಗುವುದು.
ಆನಂದ ಸಿಂಗ್,
ಪ್ರವಾಸೋದ್ಯಮ ಸಚಿವ.