ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬ್ಯಾಡಗಿ,ಜು.25: ಲಿಂಗಾಯತ ಪಂಚಮಸಾಲಿ ಸಮುದಾಯದ ಜನರು ಬಡ ಹಾಗೂ ಮಧ್ಯಮ ವರ್ಗದವರಾಗಿದ್ದು ಶೈಕ್ಷಣಿಕ ಮೀಸಲಾತಿಗೆ ಬೀದಿಗಿಳಿದಿರುವುದು ದುರಂತ, 2ಎ ಮೀಸಲಾತಿ ಹೋರಾಟದ ಹಿಂದೆ, ಅವಕಾಶ ವಂಚಿತ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಒದಗಿಸುವ ಸದುದ್ದೇಶವಿದೆ ಎಂದು ಹರಿಹರ ಪೀಠದ ವಚನಾನಂದಶ್ರೀಗಳು ತಿಳಿಸಿದರು.
ತಾಲೂಕಿನ ಕದರಮಂಡಲಗಿ ಗ್ರಾಮದ ಶ್ರೀಕಾಂತೇಶಸ್ವಾಮಿ ದೇವಸ್ಥಾನದ ಆವರಣದಲ್ಲಿ ತಾಲೂಕಾ ಪಂಚಮಸಾಲಿ ಸಮಾಜದ ವತಿಯಿಂದ ರವಿವಾರ ಆಯೋಜಿಸಿದ್ದ ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿಗಳು ರಾಜ್ಯದೆಲ್ಲೆಡೆ ಆರಂಭಿಸಿರುವ ಶಿಕ್ಷಣ ಸಂಸ್ಥೆಗಳು ನೂರಾರು ವರ್ಷಗಳಿಂದ ದೇಶಾದ್ಯಂತ ಎಲ್ಲ ವರ್ಗದ ಜನರಿಗೆ ಶಿಕ್ಷಣದ ಸೌಲಭ್ಯವನ್ನು ಕಲ್ಪಿಸಿದ್ದರಿಂದ ವಿದ್ಯಾರ್ಜನೆ ಪಡೆದುಕೊಂಡ ಲಕ್ಷಾಂತರ ಯುವಕರು ತಮ್ಮ ಬದುಕಿನಲ್ಲಿ ಶಾಶ್ವತವಾಗಿ ಅನ್ನದ ಮಾರ್ಗವನ್ನು ಕಂಡುಕೊಂಡಿದ್ದಾರೆ, ಲಿಂಗಾಯತ ಪಂಚಮಸಾಲಿ ಯಾವಾಗಲೂ ಸಹಾಯ ಹಸ್ತ ನೀಡುವವರು ಹೊರತು ಕೈಚಾಚುವರಲ್ಲ ಎನ್ನಲು ಹೆಮ್ಮೆಯಾಗುತ್ತದೆ ಎಂದರಲ್ಲದೇ, ಸಮುದಾಯಕ್ಕೆ 2ಎ ಮೀಸಲಾತಿಯು ಅತ್ಯವಶ್ಯವಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಿ ಮೀಸಲಾತಿಯನ್ನು ಜಾರಿಗೆ ತರಲು ಮುಂದಾಗಬೇಕೆಂದು ಒತ್ತಾಯಿಸಿದರು.
ಕೂಡಲ ಸಂಗಮದ ಪೀಠದ ಜಯಬಸವ ಮೃತ್ಯುಂಜಯಶ್ರೀಗಳು ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳು ಶೇ.95ಕ್ಕೂ ಹೆಚ್ಚು ಅಂಕ ಪಡೆದುಕೊಂಡರೂ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ 2ಎ ಮೀಸಲಾತಿಯು ಈ ಸಮುದಾಯಕ್ಕೆ ಅತ್ಯವಶ್ಯವಿದ್ದು, ಮೀಸಲಾತಿಯನ್ನು ಪಡೆಯಲು ಹೋರಾಟ ಮಾಡುವುದು ಅನಿವಾರ್ಯ ಎಂದರಲ್ಲದೇ, ಪ್ರತಿಭಾವಂತ ಮಕ್ಕಳಿಗೆ ಸಹಾಯ ಹಸ್ತ ಚಾಚಲು ಸಮುದಾಯ ಸಿದ್ದವಿದೆ ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣವನ್ನು ಕುಂಠಿತಗೊಳಿಸದೇ ಮುಂದುವರೆಸುವಂತೆ ಕರೆ ನೀಡಿದರು
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, 2ಎ ಮೀಸಲಾತಿ ಹೋರಾಟದ ಹಿಂದೆ ರಾಜಕೀಯ ಉದ್ದೇಶವಿಲ್ಲ, ಸಮುದಾಯದ ಎಲ್ಲ ಬಡವರಿಗೆ ಅವಕಾಶ ನೀಡುವ ಉದ್ದೇಶವಿರುವ ವಿಷಯಾಧಾರಿತ ಹೋರಾಟವಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳನ್ನು ತಾವು ಭೇಟಿಯಾಗಿ ಚರ್ಚಿಸುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರಲ್ಲದೇ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ತಾವು ಸಹಾಯ ಒದಗಿಸಲು ಸಿದ್ಧರಾಗಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಬ್ಯಾಡಗಿ ಮತಕ್ಷೇತ್ರದ ಲಿಂಗಾಯತ ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಆರ್.ಬಳ್ಳಾರಿ ತಾಲೂಕಾಧ್ಯಕ್ಷ ತಿರಕಪ್ಪ ಮರಬಸಣ್ಣನವರ, ನಗರ ಘಟಕದ ಅಧ್ಯಕ್ಷ ಬಿ.ಎಂ,ಕಡೇಕೊಪ್ಪ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಕುದರಿಹಾಳ, ಪುರಸಭೆ ಅಧ್ಯಕ್ಷೆ ಸರೋಜಾ, ಮುಖಂಡರಾದ ಜೆ.ಎಸ್.ಶಿರೂರ, ಶಿವಬಸಪ್ಪ ಕುಳೇನೂರ, ನಾಗೇಂದ್ರ ಕಡಕೋಳ, ವೀರಭದ್ರಪ್ಪ ಗೊಡಚಿ, ಸಿ.ಸಿ.ಗಡಾದ, ನಾಗನಗೌಡ ಪಾಟೀಲ, ಉಮೇಶ ಚೌಧರಿ, ಶೇಖರಗೌಡ ಗೌಡ್ರ, ಶಂಕರಗೌಡ ಪಾಟಿಲ, ಮರಡೆಪ್ಪ ಹೆಡಿಯಾಲ, ಶಿವಯೋಗಿ ಗಡಾದ,ದಯಾನಂದ ಉಳ್ಳಾಗಡ್ಡಿ, ಬಸವರಾಜ ದಿಡಗೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.