ಪಂಚಮಸಾಲಿ ಲಿಂಗಾಯಿತರಿಗೆ ಮೀಸಲಾತಿಗಾಗಿ ಬೃಹತ್ ಪಾದಯಾತ್ರೆ

ತುಮಕೂರು, ಜ. ೧೧- ಪಂಚಮಸಾಲಿ ಲಿಂಗಾಯತರಿಗೆ ರಾಜ್ಯ ಸರ್ಕಾರ ‘೨ಎ’ ಮೀಸಲಾತಿ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಎಲ್ಲಾ ಬಡ ಲಿಂಗಾಯತರನ್ನು ಓಬಿಸಿಗೆ ಸೇರಿಸಲು ಜ.೧೪ ರ ಮಕರ ಸಂಕ್ರಾಂತಿಯೊಳಗೆ ಘೋಷಿಸಿದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆಯ ವಿಜಯೋತ್ಸವ ಮಾಡಲಾಗುವುದು, ಮೀಸಲಾತಿ ಘೋಷಿಸದಿದ್ದರೆ ಜ. ೧೪ ರಿಂದ ಕೂಡಲಸಂಗಮ ಸುಕ್ಷೇತ್ರದಿಂದ ಪಂಚಲಕ್ಷ ಹೆಜ್ಜೆಗಳ ಬೃಹತ್ ಪಾದಯಾತ್ರೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಸಿದ್ಧಗಂಗಾ ಮಠದ ವಸ್ತುಪ್ರದರ್ಶನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಹುಸಂಖ್ಯಾತ ಲಿಂಗಾಯತ ಸಮುದಾಯದಲ್ಲಿಯೇ ಅಗ್ರಗಣ್ಯ ಸಮಾಜವಾದ ಪಂಚಮಸಾಲಿ ಸಮಾಜವು ಬಹುತೇಕ ಕೃಷಿಯನ್ನೇ ಕುಲಕಾಯಕವನ್ನಾಗಿ ಮಾಡಿಕೊಂಡು ಕೃಷಿ ಕಾರ್ಮಿಕರಾಗಿ ದುಡಿಯುತ್ತಾ ಶೇ.೯೫ ರಷ್ಟು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದರು.
ಈ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ೨ಎ ಮೀಸಲಾತಿ ನೀಡಬೇಕು. ಜತೆಗೆ ಎಲ್ಲಾ ಬಡ ಲಿಂಗಾಯತರಿಗೂ ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿ ನೀಡಬೇಕು ಎಂಬುದು ದಶಕಗಳ ಹೋರಾಟವಾಗಿದೆ ಎಂದು ಹೇಳಿದರು.
ಎಸ್ಸಿ, ಎಸ್ಟಿ ಸಮುದಾಯಗಳಿಗೆ ೧೮ ರಷ್ಟು, ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ೧೫ ಮೀಸಲಾತಿ ಇದೆ. ಈ ಮೀಸಲಾತಿಯೊಳಗೆ ಕೆಲವು ಲಿಂಗಾಯತ ಸಮುದಾಯಗಳು ಸೇರಿವೆ. ನಮ್ಮ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ೨ಎ ಮೀಸಲಾತಿ ಕಲ್ಪಿಸಿದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅನುಕೂಲವಾಗುತ್ತದೆ ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಚಿನ್ನಪ್ಪರೆಡ್ಡಿ ಆಯೋಗದ ಪ್ರಕಾರ ೧೦೮ ಲಿಂಗಾಯತ ಉಪಸಮುದಾಯಗಳಿಗೆ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕೆಂದು ೧೯೯೪ರಲ್ಲಿ ವರದಿಯಾಗಿದೆ. ಆಯೋಗ ರಚನೆಯಾಗಿ ಸರ್ಕಾರಕ್ಕೆ ವರದಿ ಕೊಟ್ಟಿದೆ. ಆದರೆ ಈ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚನೆ ಮಾಡಿಲ್ಲ ಎಂದು ಹೇಳಿದರು .
ಸರ್ಕಾರ ಸ್ಪಂದಿಸದ ಕಾರಣ ಮಕರ ಸಂಕ್ರಾಂತಿವರೆಗೆ ಅಂತಿಮ ಗಡುವು ನೀಡಿದ್ದು, ಸಂಕ್ರಾಂತಿಯೊಳಗೆ ಮೀಸಲಾತಿ ಕಲ್ಪಿಸದಿದ್ದರೆ, ಕೂಡಲಸಂಗಮದಿಂದ ಜ.೧೪ ರಂದು ಬಸವಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಸಿ, ಅಲ್ಲಿಂದ ಸುಮಾರು ೫ ರಿಂದ ೭ ಲಕ್ಷ ಪಂಚಮಸಾಲಿ ಲಿಂಗಾಯತರೊಡಗೂಡಿ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಸಮಾಜದ ಅಧ್ಯಕ್ಷ ಡಾ.ವಿಜಯಾನಂದ ಕಾಶಪ್ಪ ನವರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿರೇಕೊಪ್ಪ, ಯುವ ಘಟಕದ ರಾಜ್ಯಾಧ್ಯಕ್ಷ ಸೋಮಶೇಖರ ಆಲ್ಯಾಳ, ಅಮರೇಶ ನಾಗೂರ, ತಿಪ್ಪೇಸ್ವಾಮಿ, ಶಿವನಗೌಡ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.