ಪಂಚಮಸಾಲಿಗರು ಸಂಘಟಿತರಾಗುವುದು ಅತ್ಯವಶ್ಯಕಃ ಬಿ.ಎಂ. ಪಾಟೀಲ್

ವಿಜಯಪುರ, ಜ.3-ರಾಜ್ಯದಲ್ಲಿ 2ಎ ಮೀಸಲಾತಿ ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಪಂಚಮಸಾಲಿ ಸಮಾಜ ಸೇರ್ಪಡೆಗೆ ಸಮಾಜ ಬಾಂಧವರು ಸಂಘಟಿತರಾಗಿ ಹಕ್ಕನ್ನು ಪಡೆಯುವುದು ಅತ್ಯವಶ್ಯವಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಜಿಲ್ಲಾಧ್ಯಕ್ಷರಾದ ಬಿ.ಎಂ. ಪಾಟೀಲ್ ಕರೆ ನೀಡಿದರು.
ನಗರದ ಜೋರಾಪೂರ ಪೇಟೆ ಗವಾರ ಗಲ್ಲಿಯ ಮಹಾನಂದೇಶ್ವರ ಸಮುದಾಯ ಭವನದಲ್ಲಿ ನಗರ ಘಟಕದ ವತಿಯಿಂದ ಏರ್ಪಡಿಸಿದ್ದ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯ ಮುಖ್ಯ ಅತಿಥಿ, ಉಪನ್ಯಾಸಕರನ್ನಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಜನೇವರಿ 14 ರಂದು ಧರ್ಮಕ್ಷೇತ್ರ ಕೂಡಲಸಂಗಮದಿಂದ ಪಂಚಮಸಾಲಿ ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಒದಗಿಸಲು ಆಗ್ರಹಿಸಿ ಬೆಂಗಳೂರು ವಿಧಾನಸೌಧದವರೆಗೆ ಲಕ್ಷಾಂತರ ಜನತೆ ಸಾಮಾಜಿಕ-ರಾಜಕೀಯ-ಸಂಘ-ಸಂಸ್ಥೆಗಳು, ಧುರೀಣರೊಂದಿಗೆ ಪಂಚಲಕ್ಷ ಪಾದಯಾತ್ರೆ ಕೈಗೊಳ್ಳಲಿದ್ದು ತನ್ನಿಮಿತ್ತ ವಿಜಯಪುರ ಆಶ್ರಮ ರಸ್ತೆ ಚಾಲುಕ್ಯ ನಗರದ ಬೆಳಿಗ್ಗೆ 10-30 ಗಂಟೆಗೆ ‘ಸಾಯಿ ವಿಹಾರ’ದಲ್ಲಿ ಪೂರ್ವಭಾವಿ ಸಭೆಯನ್ನು ಪಂಚಮಸಾಲಿ ಜಗದ್ಗುರುಗಳ ಸಾನಿಧ್ಯದಲ್ಲಿ ರಾಜಕೀಯ ಧುರೀಣರ, ಗಣ್ಯಮಾನ್ಯರ, ಸಮಾಜದ ಬಾಂಧವರ ಸಂಘ-ಸಂಸ್ಥೆಗಳ, ಮಹಿಳೆಯರ, ಯುವಕರ ಎಲ್ಲ ಜಿಲ್ಲಾ, ತಾಲೂಕಾ, ನಗರ, ಗ್ರಾಮ ಘಟಕಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನತೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕಾರ್ಯಾಧ್ಯಕ್ಷರಾದ ಡಾ. ಸಿ.ಎಸ್. ಸೋಲಾಪೂರ ಮಾತನಾಡಿ ಇಂದು ನಾವು ಸಂಘಟಿತರಾಗಿ ಸಮಾಜಕ್ಕೆ ಮೀಸಲಾತಿಗಾಗಿ ಹೋರಾಡದಿದ್ದರೆ ನಮಗೆ ಮತ್ತೆಂದು ಮೀಸಲಾತಿ ದೊರಕಲಾರದು. ಸಮಾಜದಲ್ಲಿ ಜನಸಂಖ್ಯಾ ದೃಷ್ಟಿಯಿಂದ ಸಮಾಜ ಬಾಂಧವರು ಹೆಚ್ಚಿದ್ದರು ಸರಕಾರದ ಹಾಗೂ ಇನ್ನಿತರ ಅವಕಾಶವಂಚಿತರು ಬಡವರು ಸಾಕಷ್ಟು ಜನರಿದ್ದಾರೆ.ಕಾರಣ ಮುಂದಿನ ಜನಾಂಗದ ಅನುಕೂಲತೆಗಾಗಿ ಇಂದು ನಾವು ಸಂಘಟಿತರಾಗಿ ಮಾಡು ಇಲ್ಲವೆ ಮಡಿ ಎಂಬ ರೀತಿಯಲ್ಲಿ ಹೋರಾಡುವುದು ಸರಕಾರಕ್ಕೆ ಆಗ್ರಹಿಸುವುದು ಅತ್ಯವಶ್ಯವಾಗಿದೆ. ಕಾರಣ ನಾಳೆ ನಡೆಯುವ ಪೂರ್ವಭಾವಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕೆಂದು ಆಗ್ರಹಿಸಿದರು.
ಸಮಾಜದ ಹಿರಿಯರಾದ ಬಸಪ್ಪ ಈರಪ್ಪ ವಾಂಗಿ ಜಿಲ್ಲಾ ವಕ್ತಾರ ನ್ಯಾಯವಾದಿ ದಾನೇಶ ಅವಟಿ, ಶರಣಪ್ಪ ಜಂಬಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂದರ್ಭಿಕವಾಗಿ ಮಾತನಾಡಿದರು.
ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬುಕ್ಕಣ್ಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗವಿಸಿದ್ದ ಅವಟಿ, ಎಸ್.ಎಸ್. ಬೆಳ್ಳುರ, ಆನಂದ ಹಂಜಿ, ಸಂದೀಪ ಇಂಡಿ, ಬಿ.ಎಂ. ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು. ಮಂಜುನಾಥ ನಿಡೋಣಿ ನಿರೂಪಿಸಿದರು. ನಿಂಗಪ್ಪ ಸಂಗಾಪೂರ ವಂದಿಸಿದರು.