ಪಂಚನ್ಯಾಯ ಕಾರ್ಡ್‍ಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸಿ:ಎಸ್.ಆರ್. ಪಾಟೀಲ ಕರೆ

ಸಂಜೆವಾಣಿ ವಾರ್ತೆ,
ವಿಜಯಪುರ,21: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ವತಿಯಿಂದ ಪಂಚ ನ್ಯಾಯಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ಪಂಚ ನ್ಯಾಯ ಭರವಸೆಗಳನ್ನು ಈಡೇರಿಸಲಿದೆ. ಈ ಬಗ್ಗೆ ಮನೆ ಮನೆಗೆ ತೆರಳಿ ಪಂಚ ನ್ಯಾಯ ಕಾರ್ಡ್‍ಗಳನ್ನು ಜನರಿಗೆ ಮನವರಿಕೆ ಮಾಡಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ (ಬ್ಯಾಡಗಿ) ಕರೆ ನೀಡಿದರು.
ವಿಜಯಪುರ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಯೋಜಿಸಿದ ಜಿಲ್ಲಾ ಅನುಷ್ಠಾನ ಸಮಿತಿ ಹಾಗೂ ತಾಲೂಕಾ ಸಮಿತಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ಗ್ಯಾರಂಟಿಗಳನ್ನು ಘೋಷಿಸಿದ್ದರು. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ಎಲ್ಲ ವರ್ಗದವರಿಗೂ ಈ ಯೋಜನೆಗಳು ತಲುಪಿ ಜನರು ಸಂತೋಷದಿಂದಿದ್ದಾರೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿಯೂ ಎಐಸಿಸಿ ವತಿಯಿಂದ ‘ಪಂಚನ್ಯಾಯ’ ಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣ ಈ ‘ಪಂಚನ್ಯಾಯ’ ಗಳನ್ನು ಈಡೇರಿಸಲು ಬದ್ಧವಾಗಿದೆ. ಈ ಯೋಜನೆಗಳ ಗ್ಯಾರಂಟಿ ಕಾರ್ಡ್‍ಗಳನ್ನು ಜಿಲ್ಲೆಯ ಪ್ರತಿ ಮನೆ ಮನೆಗೆ ಭೇಟಿ ನೀಡಿ ಅವರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯರು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಇಲಿಯಾಸ ಬೋರಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವರ ಹಿಪ್ಪರಗಿ ತಾಲೂಕಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸಾಹೇಬಗೌಡ ಬಿರಾದಾರ ಹಾಗೂ ಸದಸ್ಯರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಹೊನಮಲ್ಲ ಸಾರವಾಡ, ಶ್ರೀಶೈಲ ಕವಲಗಿ, ವ್ಹಿಡಿಎ ಅಧ್ಯಕ್ಷ ಕನ್ನಾನ ಮುಶ್ರೀಫ್, ರಾಮನಗೌಡ ಬಗಲಿ, ರಮೇಶ ಗುಬ್ಬೇವಾಡ, ಸಣ್ಣಪ್ಪ ತಳವಾರ, ಶ್ರೀಕಾಂತ ಛಾಯಾಗೋಳ, ಮಹಾದೇವಿ ಗೋಕಾಕ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಅಮಿತ ಚವ್ಹಾಣ, ನಿಂಗಪ್ಪ ಸಂಗಾಪೂರ, ಬಾಪುಗೌಡ ಪಾಟೀಲ, ಸುಭಾಷ ಕಾಲೇಬಾಗ, ಪ್ರಕಾಶ ಪಾಟೀಲ, ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಆನಂದ ಜಾಧವ ಮತ್ತು ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.