ನ 5 ರಂದು ಬ್ಯಾಡಗಿ ಪುರಸಭೆ ಚುನಾವಣೆ

ಬ್ಯಾಡಗಿ, ನ 5- ಕಳೆದ 17 ತಿಂಗಳುಗಳಿಂದ ಪುರಸಭೆಯ ನೂತನ ಸದಸ್ಯರಾಗಿ ಆಯ್ಕೆಗೊಂಡರೂ ಕೂಡ ಅಧಿಕಾರವಿಲ್ಲದೇ ಪರಿತಪಿಸುತ್ತಿದ್ದ ಸದಸ್ಯರಿಗೆ ಕೊನೆಗೂ ಅವರ ಮೊಗದಲ್ಲಿ ಸಂತಸ ಮೂಡಿಸಿದ್ದು, ಇದೇ ದಿ. 6 ರಂದು ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ತಹಶೀಲ್ದಾರ ರವಿಕುಮಾರ ಕೊರವರ ಮಹೂರ್ತ ನಿಗದಿಪಡಿಸಿ ಆದೇಶಿಸಿದ್ದಾರೆ.
ಕಳೆದ ಒಂದೂವರೆ ವರ್ಷದ ಹಿಂದೆ ಪುರಸಭೆಯ 23 ವಾರ್ಡ್’ಗಳಿಗೆ ನಡೆದ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿಗೆ ಪಕ್ಷೇತರರಾಗಿ ಚುನಾಯಿತರಾಗಿದ್ದ ನಾಲ್ವರು ಸದಸ್ಯರೂ ಕೂಡ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಜೊತೆಗೆ ಬಿಜೆಪಿಯ ಬಲವನ್ನು 17 ಸ್ಥಾನಕ್ಕೆ ಹೆಚ್ಚಿಸಿದ್ದಾರೆ. ಕೇವಲ ಆರು ಸದಸ್ಯರನ್ನು ಹೊಂದಿರುವ ಕಾಂಗ್ರೇಸ್ ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.
ಆಕಾಂಕ್ಷಿಗಳ ಕಸರತ್ತು…!!
ಸದ್ಯದ ಪರಿಸ್ಥಿತಿಯಲ್ಲಿ ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ “ಅ” ವರ್ಗದ ಮಹಿಳೆಗೆ ಮೀಸಲಾಗಿದ್ದು, ಆಕಾಂಕ್ಷಿಗಳ ಪಟ್ಟಿ ಮಾತ್ರ ಬಿಜೆಪಿ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಚುನಾವಣೆಯ ದಿನಾಂಕ ಘೋಷಿತವಾಗುತ್ತಿದ್ದಂತೆ ಬಿಜೆಪಿ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಎರಡೂ ಸ್ಥಾನಗಳಿಗೆ ಆಕಾಂಕ್ಷಿಗಳ ಒತ್ತಡ ಜೋರಾಗಿದೆ. ಮೊದಲ ಹಂತದ 30 ತಿಂಗಳ ಅಧಿಕಾರದ ಗದ್ದುಗೆ ಏರಲು ಯಾರಿಗೆ ಅವಕಾಶ ನೀಡಬೇಕು ಎನ್ನುವುದು ಹಾಲಿ ಮತ್ತು ಮಾಜಿ ಶಾಸಕರಿಗೆ ಕಗ್ಗಂಟಾಗಿದೆ.
ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಅಧಿಕೃತವಾಗಿ ಇಬ್ಬರು ಮಹಿಳೆಯರಾದ ಫಕ್ಕೀರಮ್ಮ ಚಲುವಾದಿ (ಎಸ್. ಸಿ ಕ್ಷೇತ್ರದಿಂದ) ಹಾಗೂ ಕಲಾವತಿ ಬಡಿಗೇರ (ಹಿಂದುಳಿದ “ಅ” ವರ್ಗ) ಮಾತ್ರ ಆಯ್ಕೆಗೊಂಡಿದ್ದರು. ಇನ್ನು ಬಿಜೆಪಿಯಿಂದ ಟಿಕೇಟ್ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಗಾಯತ್ರಿ ರಾಯ್ಕರ, ಸರೋಜಾ ಉಳ್ಳಾಗಡ್ಡಿ, ಮಲ್ಲಮ್ಮ ಪಾಟೀಲ ಹಾಗೂ ಕವಿತಾ ಸೊಪ್ಪಿನಮಠ ಅವರು ಮತ್ತೆ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿ ಪೈಪೆÇೀಟಿ ನಡೆಸಿರುವುದು ಚುನಾವಣೆಗೆ ರಂಗೇರಿಸಿದಂತಾಗಿದೆ.
ಆಯ್ಕೆ ಬಹುತೇಕ ಖಚಿತ..?
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಫಕ್ಕೀರಮ್ಮ ಚಲುವಾದಿ, ಹಿಂದುಳಿದ “ಅ” ವರ್ಗಕ್ಕೆ ಮೀಸಲಾಗಿರುವ ಸ್ಥಾನಕ್ಕೆ ಕಲಾವತಿ ಬಡಿಗೇರ ಅವರು ಮೊದಲ ಹಂತದಲ್ಲಿ ಅಧಿಕಾರ ಹಂಚಿಕೆಯ ಸೂತ್ರದ ಆಧಾರದ ಮೇಲೆ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ ಕೆಲವರ ಅನಿಸಿಕೆಯ ಪ್ರಕಾರ ಎಸ್.ಸಿ. ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಫಕ್ಕೀರಮ್ಮ ಚಲುವಾದಿ ಅವರಿಗೆ ಮುಂದಿನ ಎರಡನೇ ಹಂತದ 30 ತಿಂಗಳುಗಳ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆಗೆ ಮೀಸಲು ಎಂದು ಪ್ರಕಟಗೊಂಡರೆ ಆ ಸಂದರ್ಭದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧ್ಯಕ್ಷ ಸ್ಥಾನದ ಅಧಿಕಾರವನ್ನು ಹೊಂದುವ ಅದೃಷ್ಟವೂ ಕೂಡಿ ಬರುವ ಅವಕಾಶವಿದ್ದು, ಈ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರು ಸೂಕ್ತ ನಿರ್ಣಯ ಕೈಗೊಳ್ಳುವ ಮೂಲಕ ಇತರ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸುವ ಸೌಭಾಗ್ಯವನ್ನು ಕೊಡಬೇಕೆಂದು ರಾಜಕೀಯ ದಾಳವನ್ನು ಉರುಳಿಸಿದ್ದು, ವರಿಷ್ಠರು ಮಾತ್ರ ತಮ್ಮ ಒಮ್ಮತದ ನಿರ್ಧಾರಕ್ಕೆ ಎಲ್ಲ ಆಕಾಂಕ್ಷಿಗಳು ಬದ್ಧರಾಗಿರಬೇಕು ಇಲ್ಲದೇ ಹೋದಲ್ಲಿ ಅದೃಷ್ಟದಾಟದ (ಚೀಟಿ ಎತ್ತುವ) ಮೊರೆ ಹೋಗುವ ಸಾಧ್ಯತೆಗಳಿವೆ ಎಂದು ತಿಳಿಸಿರುವ ಬಗ್ಗೆ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.